ಪಣಜಿ, ಆ 25 (DaijiworldNews/DB): ಗೋವಾದಲ್ಲಿ ಮೃತಪಟ್ಟ ಬಿಜೆಪಿ ಮುಖಂಡೆ ಸೋನಾಲಿ ಫೋಗಟ್ ಅವರ ಮರಣೋತ್ತರ ಪರೀಕ್ಷೆ ಅಥವಾ ವಿಧಿ ವಿಜ್ಞಾನ ಪರೀಕ್ಷೆಗೆ ಷರತ್ತಿನ ಮೇರೆಗೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಯ ಕಾರ್ಯವಿಧಾನವನ್ನು ಸಂಪೂರ್ಣವಾಗಿ ವೀಡಿಯೊ ಚಿತ್ರೀಕರಣ ಮಾಡಬೇಕೆಂಬ ಷರತ್ತನ್ನು ಕುಟುಂಬಿಕರು ಹಾಕಿದ್ದಾರೆ ಎಂದು ಅವರ ಸೋದರಳಿಯ ಮಹಿಂದರ್ ಫೋಗಟ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸೋನಾಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಇದು ಸಹಜ ಸಾವಲ್ಲ ಎಂಬುದಾಗಿ ಅವರ ಮನೆಯವರು ಅನುಮಾನ ವ್ಯಕ್ತಪಡಿಸಿದ್ದರು. ಈ ನಡುವೆ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋನಾಲಿ ಮರಣೋತ್ತರ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಸಾವಿಗೆ ಅವರ ಸಹಚರರೇ ಕಾರಣವೆಂದು ಸಹೋದರ ರಿಂಕು ಢಾಕಾ ಆರೋಪಿಸಿದ್ದರು. ಸಹಚರರಿಬ್ಬರ ಮೇಲೆ ಎಫ್ಐಆರ್ ದಾಖಲಿಸಯವವರೆಗೂ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡುವುದಿಲ್ಲ ಎಂದು ಪಟ್ಟ ಹಿಡಿದಿದ್ದರು. ಇದೀಗ ಕುಟುಂಬಿಕರು ಷರತ್ತಿನೊಂದಿಗೆ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಿದ್ದು, ಸಂಪೂರ್ಣ ಕಾರ್ಯವಿಧಾನವನ್ನು ವೀಡಿಯೋ ಚಿತ್ರೀಕರಣ ಮಾಡುವಂತೆ ಷರತ್ತು ವಿಧಿಸಿದೆ.
ಮರಣೋತ್ತರ ಪರೀಕ್ಷೆ ನಡೆದ ಬಳಿಕ ದೂರಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲು ಮಾಡುವುದಾಗಿ ಗೋವಾ ಪೊಲೀಸರು ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.