ನವದೆಹಲಿ, ಆ 25 (DaijiworldNews/DB): ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಸ್ತುತ ದೇಶದ ಉಳಿದ ರಾಜ್ಯಗಳಿಗೆ ಉತ್ತರ ಪ್ರದೇಶ ಮಾದರಿಯಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪೊಲೀಸ್ ಇಲಾಖೆಯ 144 ವಸತಿ ಮತ್ತು ವಸತಿಯೇತರ ಕಟ್ಟಡಗಳನ್ನು ಉದ್ಘಾಟಿಸಿ ಬುಧವಾರ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ಬಿಮಾರು ರಾಜ್ಯ ಎಂದು ಉತ್ತರ ಪ್ರದೇಶವನ್ನು ಪರಿಗಣಿಸಲಾಗಿತ್ತು. ಕಳಪೆ ಕಾನೂನು, ಸುವ್ಯವಸ್ಥೆ, ಅಭಿವೃದ್ದಿಯಾಗದೇ ರಾಜ್ಯ ತೀರಾ ಹಿಂದುಳಿದಿತ್ತು. ಆದರೆ ಪ್ರಸ್ತುತ ರಾಜ್ಯದ ಸಂಪೂರ್ಣ ಚಿತ್ರಣ ಬದಲಾಗಿದೆ. ಬೇರೆ ರಾಜ್ಯಗಳು ಯುಪಿ ಮಾದರಿ ಕ್ರಮಕ್ಕೆ ಮನಸೋತಿದ್ದಾರೆ ಎಂದರು.
ಐದು ವರ್ಷಗಳ ಹಿಂದೆ ಆಗಾಗ ನಡೆಯುತ್ತಿದ್ದ ಗಲಭೆಗಳಿಂದಾಗಿ ಯುಪಿ ಬಗ್ಗೆ ಜನರ ಗ್ರಹಿಕೆ ಋಣಾತ್ಮಕವಾಗಿತ್ತು. ಉದ್ಯಮಿಗಳು ಮತ್ತು ವ್ಯಾಪಾರಿಗಳೂ ಇಲ್ಲಿ ವ್ಯಾಪಾರಕ್ಕೆ ಹಿಂದೇಟು ಹಾಕುವ ಪರಿಸ್ಥಿತಿ ಇತ್ತು. ಆದರೆ ಈಗ ಎಲ್ಲವೂ ಸುರಕ್ಷಿತವಾಗಿದ್ದು, ಜನ ಉತ್ತರ ಪ್ರದೇಶದ ಕಡೆಗೆ ನೋಡುವಷ್ಟು ಬದಲಾಗಿದೆ ಎಂದವರು ಸಂತಸ ವ್ಯಕ್ತಪಡಿಸಿದರು.
ಧಾರ್ಮಿಕ ಸ್ಥಳಗಳಿಂದ ವಿವಾದರಹಿತವಾಗಿ ಧ್ವನಿವರ್ಧಕ ತೆಗೆದು ಹಾಕಲಾಗಿದೆ. ರಸ್ತೆಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯದಂತೆ ತಡೆಯಲಾಗಿದೆ. ಇಂತಹ ಮಹತ್ವದ ಬದಲಾವಣೆಗಳು ಉತ್ತರ ಪ್ರದೇಶದ ವರ್ಚಸ್ಸಿನ ಬದಲಾವಣೆಗೆ ಕಾರಣವಾಗಿದೆ ಎಂದರು.