ಜಮ್ಮು, ಅ 25 (DaijiworldNews/MS): ಭಾರತದ ನೆಲದಲ್ಲಿ ನೆಲಬಾಂಬ್ ಸ್ಫೋಟಿಸಿ ರಕ್ತಹರಿಸಲು ಬಂದಿದ್ದ ಉಗ್ರನಿಗೆ ಭಾರತೀಯ ಸೈನಿಕರು ರಕ್ತದಾನ ಮಾಡುವ ಮೂಲಕ ಆತನ ಜೀವ ಉಳಿಸಿದ್ದಾರೆ.
"ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗಡಿ ಪೋಸ್ಟ್ ನಲ್ಲಿ ಆ.21 ರಂದು ದಾಳಿ ಮಾಡಲು ಯತ್ನಿಸಿ ಗುಂಡೇಟು ತಿಂದಿದ್ದ ಪಾಕಿಸ್ತಾನಿ ಭಯೋತ್ಫಾದಕನಿಗೆ ಚಿಕಿತ್ಸೆಯ ಸಂದರ್ಭ ಭಾರತಿಯ ಸೈನಿಕರು ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದ್ದಾರೆ" ಎಂದು ರಾಜೌರಿಯ ಸೇನಾ ಆಸ್ಪತ್ರೆಯ ಕಮಾಂಡೆಂಟ್ ಬ್ರಿಗೇಡಿಯರ್ ರಾಜೀವ್ ನಾಯರ್ ಹೇಳಿದ್ದಾರೆ.
"ನಾವು ಆತನನ್ನು ಭಯೋತ್ಪಾದಕ ಎಂದು ಭಾವಿಸದೆ ಆತನ ಜೀವ ಉಳಿಸಲು ಇತರ ರೋಗಿಗಳಂತೆ ಚಿಕಿತ್ಸೆ ನೀಡಿದ್ದು,ರಕ್ತ ಹರಿಸಲು ಬಂದಿದ್ದರೂ ಆತನಿಗೆ ರಕ್ತ ನೀಡಿದ ಹಿರಿಮೆ ಭಾರತೀಯ ಸೇನೆಯ ಮೇಲಿದೆ" ಎಂದು ವಿವರಿಸಿದ್ದಾರೆ
ಉಗ್ರನನ್ನು ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್ಕೋಟ್ ಗ್ರಾಮದ ನಿವಾಸಿಯಾಗಿರುವ ಉಗ್ರ ತಬಾರಕ್ ಹುಸೇನ್ ಎಂದು ಗುರುತಿಸಲಾಗಿದ್ದು, ಆತನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಕಳುಹಿಸಿದ್ದಾರೆ ಎಂದು ವಿಚಾರಣೆ ವೇಳೆ ಆತ ಬಹಿರಂಗಪಡಿಸಿದ್ದು ಆತನ ವಿದ್ವಾಂಸಕ ಕೃತ್ಯಕ್ಕೆ30,000 ಪಾಕಿಸ್ತಾನಿ ರೂಪಾಯ ಕರ್ನರ್ ನೀಡಿದ್ದ ಎಂದು ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ಹುಸೇನ್ ತೊಡೆ ಮತ್ತು ಭುಜಕ್ಕೆ ಎರಡು ಗುಂಡಿನ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿತ್ತು. ಸೇನಾ ಸಿಬ್ಬಂದಿಗಳು ಮೂರು ಬಾಟಲಿ ರಕ್ತವನ್ನು ನೀಡಿದ್ದು ಸದ್ಯ ಆತನಿಗೆ ಶಸ್ತ್ರಚಿಕಿತ್ಸೆ ಮಾಡಿ ಐಸಿಯುನಲ್ಲಿ ಇರಿಸಲಾಗಿದ್ದು ಆರೋಗ್ಯ ಸ್ಥಿರವಾಗಿದ್ದಾರೆ ಆದರೆ ಸುಧಾರಿಸಲು ಕೆಲವು ವಾರಗಳನ್ನು ಬೇಕಾಗಿದೆ ಎಂದು ಹೇಳಿದ್ದಾರೆ.