ರಾಂಚಿ, ಆ 25 (DaijiworldNews/DB): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ನಲ್ಲಿ ವ್ಯಕ್ತಿಯೋರ್ವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.
ಪ್ರೇಮ್ ಪ್ರಕಾಶ್ ಬಂಧಿತರು. ಮುಂಜಾವು ಸುಮಾರು 2 ಗಂಟೆ ವೇಳೆಗೆ ಪ್ರೇಮ್ ಪ್ರಕಾಶ್ ಅಕ್ರಮ ಹಣ ವರ್ಗಾವಣೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ಪ್ರಕಾಶ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅಲ್ಲದೆ ಬಂಧಿತರನ್ನು ರಾಂಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಪ್ರೇಮ್ಕುಮಾರ್ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತ ಎನ್ನಲಾಗಿದೆ.
ಪ್ರೇಮ್ಕುಮಾರ್ಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಅಲ್ಲದೆ, ಅವರಿಗೆ ಸೇರಿದ ಮನೆಯೊಂದರಿಂದ ಎರಡು ಎಕೆ -47 ರೈಫಲ್ಗಳು ಮತ್ತು 60 ಬುಲೆಟ್ಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಶಸ್ತ್ರಾಸ್ತ್ರಗಳು ಜಾರ್ಖಂಡ್ ನ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಸೇರಿದ್ದಾಗಿದ್ದು, ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಈಗಾಗಲೇ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ರಾಜಕೀಯ ಸಹಾಯಕ ಪಂಕಜ್ ಮಿಶ್ರಾ ಮತ್ತು ಅವರ ಸಹವರ್ತಿ ಬಚ್ಚು ಯಾದವ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದ್ದು, ಸದ್ಯ ಪ್ರೇಮ್ಕುಮಾರ್ ಅವರ ಬಂಧನದೊಂದಿಗೆ ಮೂರು ಮಂದಿ ಬಂಧಿಸಲ್ಪಟ್ಟಂತಾಗಿದೆ.