ಬೆಂಗಳೂರು, ಆ 24 (DaijiwroldNews/SM): ಹೇಳಿಕೊಳ್ಳಲು ಯಾವುದೇ ಜನಪರ ಸಾಧನೆಗಳನ್ನು ಮಾಡದ ಬಿಜೆಪಿ ಸರ್ಕಾರ ಜನೋತ್ಸವ ಬದಲಿಗೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾವರ್ಕರ್ ಉತ್ಸವವನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ಸಾವರ್ಕರ್ ಅವರ ವಿಚಾರಧಾರೆಗಳನ್ನು ಮುಂದಿಟ್ಟು ಬಿಜೆಪಿಗೆ ಪಂಚ ಪ್ರಶ್ನೆಗಳನ್ನು ಹಾಕಿದರು.
ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟ ಮಾಡುವ ಉದ್ದೇಶ ಇದ್ದಿದ್ದರೆ ಅವರು ವಿದೇಶದಲ್ಲಿ ಬಂಧನವಾದಾಗ ಭಾರತಕ್ಕೆ ಬರಲು ಯಾಕೆ ಒಪ್ಪಲಿಲ್ಲ? ಸಾವರ್ಕರ್ ಅವರು ಸೆರೆವಾಸದಲ್ಲಿದ್ದಾಗ ಅವರು ಬ್ರಿಟಿಷರಿಗೆ ಆರು ಬಾರಿ ಕ್ಷಮಾಪಣಾ ಪತ್ರ ಬರೆದಿದ್ದು ಯಾಕೆ?
ಈ ಕ್ಷಮಾಪಣಾ ಪತ್ರಗಳನ್ನು ಬಿಜೆಪಿಯವರು ಮಾಸ್ಟರ್ ಸ್ಟ್ರೋಕ್ ಎನ್ನುತ್ತಿದ್ದು, ಇವುಗಳು ಮಾಸ್ಟರ್ ಸ್ಟ್ರೋಕ್ ಎಂದು ಭಾವಿಸಿದರೂ ಅವರು ಜೈಲಿಂದ ಬಿಡುಗಡೆಯಾದ ನಂತರ ಅವರು ಎಷ್ಟು ಹೋರಾಟ ಮಾಡಿದರು? ಅದರ ಪರಿಣಾಮಗಳೇನು? ಮುಸ್ಲೀಂ ಲೀಗ್ ಜತೆ ಅವರು ದೇಶದ ಹಲವು ಕಡೆಗಳಲ್ಲಿ ಸರ್ಕಾರ ರಚಿಸಿದ್ದು ಯಾಕೆ? ಅವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲಿಲ್ಲ ಯಾಕೆ?