ಬಿಹಾರ, ಆ 24 (DaijiworldNews/DB): ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಿಗೆ ಇಡಿ, ಐಟಿ, ಸಿಬಿಐ ಎನ್ನುವ ಮೂವರು ಅಳಿಯಂದಿರನ್ನು ಕಳುಹಿಸುತ್ತಿದೆ ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ದಾರೆ.
ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪ್ರಕ್ರಿಯೆ ವೇಳೆ ಮಾತನಾಡಿದ ಅವರು, ಅಧಿಕಾರ ಇಲ್ಲದಿದ್ದಾಗ ಅಥವಾ ಅದನ್ನು ಕಳೆದುಕೊಳ್ಳುವ ಭಯ ಇದ್ದಾಗ ಬಿಜೆಪಿ ಸಿಬಿಐ, ಇಡಿ ಮತ್ತು ಐಟಿಯನ್ನು ಛೂ ಬಿಡುವ ಪ್ರಯತ್ನ ಮಾಡುತ್ತಿದೆ. ಈ ಮೂರು ಸಂಸ್ಥೆಗಳು ಅಳಿಯಂದಿರಂತೆ. ಅಳಿಯಂದಿರನ್ನು ಅಧಿಕಾರರಹಿತ ರಾಜ್ಯಗಳಿಗೆ ಕಳುಹಿಸುವುದು ಬಿಜೆಪಿಗೆ ರೂಢಿಯಾಗಿದೆ ಎಂದರು.
ನಾನು ವಿದೇಶ ಪ್ರವಾಸಕ್ಕೆ ಹೋದರೆ ನನ್ನ ವಿರುದ್ದ ಲುಕ್ಔಟ್ ನೊಟೀಸ್ ಜಾರಿಗೊಳಿಸುವ ಬಿಜೆಪಿ, ನೀರವ್ ಮೋದಿ ಮತ್ತಿತರ ವಂಚಕರು ಪರಾರಿಯಾದರೆ ಏನೂ ಮಾಡುವುದಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ವಿಶ್ವಾಸಮತ ಯಾತನೆ ದಿನದಂದೇ ಆರ್ಜೆಡಿ ನಾಯಕರ ಮೇಲೆ ಸಿಬಿಐ ದಾಳಿಯಾಗಿರುವುದು ಖಂಡನೀಯ ಎಂದವರು ತಿಳಿಸಿದರು.
ಬಿಹಾರದ ಕಲ್ಯಾಣದಲ್ಲಿ ಜೆಡಿಯು, ಆರ್ಜೆಡಿ ಸಮ್ಮಿಶ್ರ ಸರ್ಕಾರ ನಿರಂತರವಾಗಿ ತೊಡಗಿಸಿಕೊಳ್ಳಲಿದೆ. ನಮ್ಮನ್ನು ರನೌಟ್ ಮಾಡಲು ಯಾರಿಗೂ ಸಾಧ್ಯವಿಲ್ಲ. ಬಿಹಾರ ಹಾಗೂ ದೇಶದ ಅಭಿವೃದ್ದಿಗಾಗಿ ಶ್ರಮವಹಿಸುವುದೇ ನಮ್ಮ ಪ್ರಧಾನ ಆದ್ಯತೆ ಎಂದರು.