ಬದೌನ್, ಆ 24 (DaijiworldNews/DB): ಮಲ ವಿಸರ್ಜನೆಗೆ ತೆರಳುತ್ತಿದ್ದ ಅಪ್ರಾಪ್ತೆ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಕುನ್ವರ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯೂ ಬಾಲಕಿಯ ಗ್ರಾಮದವನಾಗಿದ್ದಾನೆ. ಮಲ ವಿಸರ್ಜನೆಗಾಗಿ ಮನೆ ಸಮೀಪವಿರುವ ಕಬ್ಬಿನಗದ್ದೆಗೆ ಮಂಗಳವಾರ ತಡರಾತ್ರಿ ಬಾಲಕಿ ಹೋಗಿದ್ದಳು. ಈ ವೇಳೆ ಆಕೆಯನ್ನು ಹಿಂಬಾಲಿಸಿದ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕಬ್ಬಿನ ಗದ್ದೆಯಿಂದ ಬಾಲಕಿಯ ಚೀರಾಟ ಕೇಳಿ ಆಕೆಯ ಮನೆಯವರು ಸ್ಥಳಕ್ಕೆ ಧಾವಿಸಿದ ವೇಳೆ ಆತ ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಕುಟುಂಬಿಕರು ಮತ್ತು ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಲಕಿಯ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಆರೋಪಿ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕಿಶೋರ್ ಶ್ರೀವಾಸ್ತವ ತಿಳಿಸಿದ್ದಾರೆ.