ಅಗರ್ತಲ, ಆ 24 (DaijiworldNews/DB): ತ್ರಿಪುರಾದ ಬಿಜೆಪಿ ನಾಯಕರೊಬ್ಬರು 6,500 ಮಂದಿ ಬುಡಕಟ್ಟು ಬೆಂಬಲಿಗರೊಂದಿಗೆ ತಿಪ್ರಾ ಮೋಥಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇದು ಬಿಜೆಪಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.
ಸ್ವಾಯತ್ತ ಜಿಲ್ಲಾ ಕೌನ್ಸಿಲ್ನಲ್ಲಿ ಬಿಜೆಪಿಯ ವಿರೋಧ ಪಕ್ಷದ ನಾಯಕ ಹಂಗ್ಶಾ ಕುಮಾರ್ ತ್ರಿಪುರಾ ಅವರೇ ಬೃಹತ್ ಸಂಖ್ಯೆಯ ಬೆಂಬಲಿಗರೊಂದಿಗೆ ತಿಪ್ರಾ ಮೋಥಾಕ್ಕೆ ಸೇರ್ಪಡೆಗೊಂಡವರು. ಹಂಗ್ಶಾ ಕುಮಾರ್ ತ್ರಿಪುರಾ ಅವರೊಂದಿಗೆ 3,000 ಬುಡಕಟ್ಟು ಕುಟುಂಬಗಳ 6,500 ಮಂದಿ ತಿಪ್ರಾ ಮೋಥಾವನ್ನು ಸೇರಿದ್ದಾರೆ. ತಿಪ್ರಾ ಮೋಥಾ ನಾಯಕ ರಾಜ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಅವರು ಪಕ್ಷದ ಧ್ವಜಗಳನ್ನು ಹಸ್ತಾಂತರಿಸುವ ಮೂಲಕ ಹಂಗ್ಶಾ ಮತ್ತು ಇತರರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಸದ್ಯ ಐಪಿಎಫ್ಟಿಯೊಂದಿಗೆ ಬಿಜೆಪಿ ತ್ರಿಪುರಾದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದೆ. ಇದೀಗ ಬೃಹತ್ ಸಂಖ್ಯೆಯ ಬೆಂಬಲಿಗರೊಂದಿಗೆ ಹಂಗ್ಶಾ ಪಕ್ಷ ತೊರೆದಿರುವುದರಿಂದ 2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಆಘಾತ ಉಂಟು ಮಾಡಲಿದೆ ಎನ್ನಲಾಗುತ್ತಿದೆ. ತಿಪ್ರಾ ಮೋಥಾ ಪಕ್ಷದ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಎದುರಾಳಿಯಾಗಿದ್ದು, ಇವರಿಗೆ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಬೆಂಬಲಿಸುವ ಸಾಧ್ಯತೆಗಳೂ ಇವೆ. ಹೀಗಾಗಿ ಮುಂದಿನ ಚುನಾವಣೆ ಬಿಜೆಪಿ ಪಾಲಿಗೆ ಸಂಕಷ್ಟವಾಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ.
ಆದರೆ ಹಂಗ್ಶಾ ಪಕ್ಷಾಂತರವು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಬಿಜೆಪಿ ಹೇಳಿದೆ. ಜನಪರ ಕಲ್ಯಾಣವೇ ನನ್ನ ಆದ್ಯತೆ. ಅದಕ್ಕಾಗಿ ಬಿಜೆಪಿ ತೊರೆದಿದ್ದೇನೆ ಎಂದು ಹಂಗ್ಶಾ ಕುಮಾರ್ ತ್ರಿಪುರಾ ಇದೇ ವೇಳೆ ಪ್ರತಿಕ್ರಿಯಿಸಿದ್ದಾರೆ.