ಪಣಜಿ, ಆ 24 (DaijiworldNews/DB): ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಪೋಗಟ್ (42) ಅವರ ಸಾವು ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಈಗಾಗಲೇ ಸೋನಾಲಿ ಕುಟುಂಬಿಕರು ಗೋವಾಕ್ಕೆ ಬಂದಿದ್ದಾರೆ. ಸೋನಾಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಸಾವಿನ ಸಂಬಂಧ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದರು.
ಆಗಸ್ಟ್ 22ಕ್ಕೆ ಗೋವಾ ಪ್ರವಾಸಕ್ಕೆ ತೆರಳಿದ್ದ ಸೊನಾಲಿ ಹೊಟೇಲ್ವೊಂದರಲ್ಲಿ ಊಟ ಮಾಡಿ ಆಸ್ಪತ್ರೆಗೆ ಹೋಗಿದ್ದರು. ಹೃದಯಾಘಾತದಿಂದ ಮಂಗಳವಾರ ಉತ್ತರ ಗೋವಾದ ಸೇಂಟ್ ಆಂಟೋನಿ ಆಸ್ಪತ್ರೆಯಲ್ಲಿ ಸೋನಾಲಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿಗಳು ಹೇಳಿದ್ದವು. ಆದರೆ ಸಾವನ್ನಪ್ಪಿದ ದಿನ ರಾತ್ರಿ ತಾಯಿಗೆ ಕರೆ ಮಾಡಿ ಊಟ ಮಾಡಿದ ಬಳಿಕ ಸಂಕಷ್ಟವಾಗುತ್ತಿದೆ ಎಂದು ಸೋನಾಲಿ ಹೇಳಿಕೊಂಡಿದ್ದರು. ಆಕೆಯ ಸಾವು ಸಹಜ ಸಾವಲ್ಲ, ವ್ಯವಸ್ಥಿತ ಕೊಲೆ ಎಂಬುದಾಗಿ ಸೋನಾಲಿ ಸಹೋದರಿ ಆರೋಪಿಸಿದ್ದರು.
ಸೋನಾಲಿ ಸಾವಿನ ಬಗ್ಗೆ ಹರಿಯಾಣ ವಿರೋಧ ಪಕ್ಷಗಳು ಕೂಡಾ ಅನುಮಾನ ವ್ಯಕ್ತಪಡಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದವು. ಈ ಬೆಳವಣಿಗೆಗಳ ಬೆನ್ನಲ್ಲೇ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ.