ನವದೆಹಲಿ, ಆ 24 (DaijiworldNews/DB): ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷ ಹುದ್ದೆಯ ಆಫರ್ ನೀಡಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಬುಧವಾರ ಮಾಹಿತಿ ನೀಡಿದ ಅವರು, ನನಗೆ ಪಕ್ಷದ ಅಧ್ಯಕ್ಷ ಹುದ್ದೆಯ ಆಫರ್ ಬಂದಿಲ್ಲ. ಈ ಸಂಬಂಧ ಹರಿದಾಡುತ್ತಿರುವ ಸುದ್ದಿಗಳು ನಿರಾಧಾರ. ರಾಜಸ್ಥಾನ ವಿಚಾರದಲ್ಲಿ ನನಗೆ ವರಿಷ್ಠರು ನೀಡಿರುವ ಜವಾಬ್ದಾರಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ಅಧ್ಯಕ್ಷ ಹುದ್ದೆ ಕುರಿತು ಹರಿದಾಡುತ್ತಿರುವ ಸುದ್ದಿಗಳು ಮಾಧ್ಯಮಗಳ ಮುಖಾಂತರ ನನಗೆ ತಿಳಿಯಿತು. ಆದರೆ ನನಗೆ ಅಂತಹ ಯಾವುದೇ ಆಫರ್ಗಳು ಬಂದಿಲ್ಲ. ಮುಂಬರುವ ಗುಜರಾತ್ ಚುನಾವಣೆಯಲ್ಲಿ ಪಕ್ಷದ ವೀಕ್ಷಕನಾಗಿ ನಾನು ಕರ್ತವ್ಯ ನಿರ್ವಹಿಸಲಿದ್ದೇನೆ. ರಾಜಸ್ಥಾನದ ಹೊಣೆಯೂ ನನ್ನ ಮೇಲಿದೆ ಎಂದವರು ತಿಳಿಸಿದರು.