ನವದೆಹಲಿ, ಆ 24 (DaijiworldNews/DB): ಬಿಜೆಪಿಯು ಎಎಪಿ ಶಾಸಕರಿಗೆ ಆಮಿಷವೊಡ್ಡಿ ಬೆದರಿಕೆ ಹಾಕುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಬಿಜೆಪಿಯ ಈ ರೀತಿಯ ಚಟುವಟಿಕೆಗಳು ಆಮ್ ಆದ್ಮಿ ಪಕ್ಷವನ್ನು ಒಡೆಯುವುದಕ್ಕೇ ಆಗಿದೆ. ಈ ಕುರಿತು ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ ಇಂದು ಸಂಜೆ 4 ಗಂಟೆಗೆ ಸಭೆ ಸೇರಿ ನಡೆಸಲಿದ್ದು, ಚರ್ಚಿಸಲಾಗುವುದು ಎಂದರು.
ಆಮಿಷವೊಡ್ಡಿರುವ ಮತ್ತು ಬೆದರಿಕೆ ಹಾಕಿರುವ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವು ಶಾಸಕರು ಈಗಾಗಲೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಇದನ್ನು ನಿರ್ಲಕ್ಷಿಸುವಂತಿಲ್ಲ. ಇದೊಂದು ಗಂಭೀರ ವಿಷಯವಾಗಿದ್ದು, ಚರ್ಚೆ ನಡೆಸುವ ಅವಶ್ಯಕತೆ ಇದೆ ಎಂದವರು ತಿಳಿಸಿದರು.
ಎಎಪಿ ಮುಖಂಡರ ಮೇಲಿನ ಸಿಬಿಐ ದಾಳಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಗುಜರಾತ್ ಚುನಾವಣೆ ಮುಗಿಯುವವರೆಗೆ ಇಂತಹ ದಾಳಿ, ತನಿಖೆಗಳು ಮುಂದುವರಿಯಲಿವೆ ಎಂಬುದು ನಮಗೆ ಗೊತ್ತಿರುವ ವಿಚಾರವೇ ಎಂದರು.