ಬೆಂಗಳೂರು, ಆ 24 (DaijiworldNews/DB): ಅತ್ಯಾಚಾರ ಎಸಗಿದಾತನನ್ನೇ ಸಂತ್ರಸ್ತೆ ವಿವಾಹವಾದ ಹಿನ್ನೆಲೆಯಲ್ಲಿ ಆತನ ವಿರುದ್ದ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
23 ವರ್ಷದ ಯುವಕ 17 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಹಿನ್ನೆಲೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿದ್ದ. ಆದರೆ ಸಂತ್ರಸ್ತೆ 18 ವರ್ಷ ತುಂಬಿದ ಬಳಿಕ ಅತ್ಯಾಚಾರ ಎಸಗಿದ ಆರೋಪಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಳು. ಅಲ್ಲದೆ ಈ ಪ್ರಕರಣ ಸೆಷನ್ಸ್ ಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿರುವಾಗ ದಂಪತಿ ಮಗುವಿಗೆ ಜನ್ಮ ನೀಡಿದ್ದರು. ಇಂತಹ ಪ್ರಕರಣದಲ್ಲಿ ಅರ್ಜಿದಾರರ ವಿರುದ್ದದ ತಪ್ಪು ಸಾಬೀತುಪಡಿಸುವುದು ಕಷ್ಟಕರ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಈ ವೇಳೆ ಪ್ರಾಸಿಕ್ಯೂಶನ್ ವಿರೋಧ ವ್ಯಕ್ತಪಡಿಸಿದಾಗ, ಕಕ್ಷಿದಾರರ ಮತ್ತು ಸಂತ್ರಸ್ತೆಯ ನಡುವಿನ ಒಪ್ಪಂದವನ್ನು ಅಂಗೀಕರಿಸಿ ಪ್ರಕ್ರಿಯೆಗಳಿಗೆ ಅಂತಿಮ ಮುದ್ರೆಯೊತ್ತುವುದು ಸೂಕ್ತ. ವೈವಾಹಿಕ ಜೀವನಕ್ಕೆ ಕಾಲಿಟ್ಟು ಮಗುವನ್ನು ಹೆತ್ತ ಬಳಿಕ ಅವರಿಗೆ ನ್ಯಾಯಾಲಯ ಬಾಗಿಲು ಹಾಕುವುದು ಸೂಕ್ತವಲ್ಲ ಎಂದು ಕೋರ್ಟ್ ಹೇಳಿದೆ.
ಅಪ್ರಾಪ್ತ ಮಗಳು ನಾಪತ್ತೆಯಾಗಿರುವ ಬಗ್ಗೆ ಮಾರ್ಚ್ 2019ರಲ್ಲಿ ಆಕೆಯ ತಂದೆ ದೂರು ದಾಖಲಿಸಿದ್ದರು. ಆದರೆ ಬಳಿಕ ಆಕೆ ಆರೋಪಿಯೊಂದಿಗೆ ಪತ್ತೆಯಾಗಿದ್ದು, ಒಮ್ಮತದಿಂದಲೇ ಇಬ್ಬರೂ ನಡೆದುಕೊಂಡಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಆಕೆಗೆ 17 ವರ್ಷವಾಗಿದ್ದ ಕಾರಣ ಆರೋಪಿ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿ 18 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದ. ಆತ ಜಾಮೀನಿನ ಮೇಲೆ ಹೊರಬಂದ ಬಳಿಕ 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.