ಹೈದರಾಬಾದ್, ಆ 24 (DaijiworldNews/DB): ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಿ ಬಂಧಿಸಲ್ಪಟ್ಟು ಒಂದೇ ದಿನದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರ ಬಂದ ತೆಲಂಗಾಣ ಶಾಸಕ ರಾಜಾಸಿಂಗ್ ಅವರು ತಮ್ಮ ನಿವಾಸಕ್ಕೆ ತೆರಳುವ ವೇಳೆ ಪಾತಬಸ್ತಿಯಲ್ಲಿ ಕೆಲವರು ಅವರ ವಿರುದ್ದ ಘೋಷಣೆ ಕೂಗಿದ ಘಟನೆ ನಡೆಯಿತು.
ರಾಜಾಸಿಂಗ್ ವಿರುದ್ದ ಪಾತಬಸ್ತಿಯಲ್ಲಿ ಸೇರಿದ್ದ ಕೆಲವರು ಘೋಷಣೆ ಕೂಗಿದರು. ಇದೇ ವೇಳೆ ದೊಡ್ಡ ಮಟ್ಟದಲ್ಲಿ ಸೇರಿದ ಕಾರ್ಯಕರ್ತರು ಅವರಿಗೆ ಬೆಂಬಲ ಸೂಚಿಸಿದರು. ಹೀಗಾಗಿ ಎರಡೂ ಕಡೆ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದಕ್ಕಾಗಿ ಪೊಲೀಸರು ಪಾತಬಸ್ತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಮಂಗಳವಾರ ತಡರಾತ್ರಿ ಹಳೆ ಬಸ್ತಿಯಲ್ಲಿ ಸ್ಥಳೀಯ ಯುವಕರಿಂದ ಈ ವಿಚಾರವಾಗಿ ಪ್ರತಿಭಟನೆ ನಡೆಸಿದ್ದರು. ಚಾರ್ಮಿನಾರ್ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರಿ ಸಾಲಿಬಂದಾ ಚೌಕಾದಲ್ಲಿ ರಾಜಾಸಿಂಗ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ್ದರು. ಮುಘಲ್ಪುರದ ವೋಲ್ಟಾ ಕ್ರಾಸ್ ರಸ್ತೆಯಲ್ಲಿ ಪ್ರತಿಭಟನಾಕಾರರು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಚಾರ್ಮಿನಾರ್ ಸುತ್ತಮುತ್ತ ಬುಧವಾರ ಬೆಳಗ್ಗೆಯೂ ರಾಜಾಸಿಂಗ್ ವಿರುದ್ದ ಕೆಲವು ಯುವಕರು ಘೋಷಣೆಗಳನ್ನು ಕೂಗಿದ್ದು, ಪಾತಬಸ್ತಿಯಿಂದ ಗೋಶಮಹಲ್ಗೆ ತೆರಳುವ ಎಲ್ಲಾ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿ ಬಂದೋಬಸ್ತ್ ಕೈಗೊಂಡರು.
ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಿದ ಕಾರಣಕ್ಕಾಗಿ ಮಂಗಳವಾರ ಬೆಳಗ್ಗೆ ರಾಜಾ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಸಂಜೆ ವೇಳೆಗೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಬಿಜೆಪಿ ಆದೇಶ ಹೊರಡಿಸಿತ್ತು. ಇಂದು ಪೊಲೀಸರು ರಾಜಾ ಸಿಂಗ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ಮಂಜೂರಾಗಿತ್ತು.