ಬೆಂಗಳೂರು, ಆ 24 (DaijiworldNews/DB): ವಿಚಾರವೊಂದರ ಚರ್ಚೆ ವೇಳೆ ಕ್ಲಬ್ ಹೌಸ್ನಲ್ಲಿ ಪಾಕ್ ಪರ ಘೋಷಣೆ ಕೂಗಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬಳ್ಳಾರಿ ಮೂಲದ ಸುರಭ್ ಮತ್ತು ಬೆಂಗಳೂರಿನ ಸಹಕಾರ ನಗರದ ರಾಹುಲ್ ವಿಚಾರಣೆಗೊಳಪಟ್ಟವರು. ಸುರಭ್ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಸಾಫ್ಟ್ವೇರ್ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಹಾಗೂ ರಾಹುಲ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈಗಾಗಲೇ ಈ ಪ್ರಕರಣ ಸಂಬಂಧ 10ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಇತರ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕ್ಲಬ್ ಹೌಸ್ನಲ್ಲಿ ವಿಷಯವೊಂದರ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ತಾಕತ್ತಿದ್ದರೆ ಪಾಕ್ ಪರ ಘೋಷಣೆ ಕೂಗಿ ಎಂದು ಕೆಲವರು ಸವಾಲು ಹಾಕಿದ್ದಾರೆ. ಇದಕ್ಕಾಗಿ ಕೆಲವರು ಪಾಕ್ ಪರ ಘೋಷಣೆ ಕೂಗಿದ್ದ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಪೊಲೀಸರು ಈ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಅದರಂತೆ ಆರೋಪಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.