ರಾಮನಗರ, ಆ 24 (DaijiworldNews/DB): ನಾನು ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತೇನೆಂಬ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆಂಬ ವದಂತಿ ಹರಡಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಸ್ಪಷ್ಟನೆ ನೀಡಿದ ಅವರು, ನಾನು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆಂಬುದಾಗಿ ಕೆಲವರು ವೃಥಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಪಕ್ಷದಲ್ಲಿ ನನ್ನ ಬಗ್ಗೆ ನಂಬಿಕೆ ಹೊರಟು ಹೋಗುವಂತೆ ಮಾಡಲು ಈ ರೀತಿಯ ಯತ್ನ ಮಾಡಲಾಗುತ್ತಿದೆ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ರಾಜಕೀಯ ಜೀವನ ಬಿಜೆಪಿಯಲ್ಲಿ ಮಾತ್ರ ಇರುತ್ತದೆ ಎಂದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಈಗಾಗಲೇ ಇತರ ಪಕ್ಷಗಳ 15ರಿಂದ 20 ಮಂದಿ ನಾಯಕರು ಬಿಜೆಪಿ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಯುವ ನಾಯಕರನ್ನು ಬಿಜೆಪಿಗೆ ಕರೆ ತರುವ ಪ್ರಯತ್ನದಲ್ಲಿ ಸದ್ಯ ನಾನು ಕೂಡಾ ತೊಡಗಿಸಿಕೊಂಡಿದ್ದೇನೆ ಎಂದವರು ತಿಳಿಸಿದರು.
ಎಲ್ಲಾ ಸರ್ಕಾರದಲ್ಲಿಯೂ ಮಾಜಿ ಸಿಎಂ ಎಂಬ ಟ್ಯಾಗ್ ಎಚ್.ಡಿ. ಕುಮಾರಸ್ವಾಮಿಗಿದೆ. ಸಿಎಂ ಆದರೆ ಚೆನ್ನಪಟ್ಟಣವನ್ನು ಚಿನ್ನದ, ಚೆಂದದ ಪಟ್ಟಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಪ್ರತಿ ಊರಿನಲ್ಲಿಯೂ ಮುಗ್ದ ಜನರಿಗೆ ಮೋಸ ಮಾಡಿದ್ದಾರೆ. ಸಾಲ ಮನ್ನಾ ಮಾಡುವುದಾಗಿ ಹೇಳಿ ಪಾಸ್ಬುಕ್ ಜೆರಾಕ್ಸ್ ಪಡೆದು ಅನ್ಯಾಯ ಮಾಡಿದ್ದಾರೆ. ಅವರದ್ದು ಅಡ್ಜೆಸ್ಟ್ಮೆಂಟ್ ರಾಜಕೀಯ ಎಂದು ಇದೇ ವೇಳೆ ಟೀಕಿಸಿದರು.
ನಮ್ಮ ಮುಖ್ಯಮಂತ್ರಿಯವರು ಎಚ್.ಡಿ. ಕುಮಾರಸ್ವಾಮಿಯ ಸ್ನೇಹಿತರಾಗಿರುವುದರಿಂದ ಅವರಿಗೆ ಫೇವರ್ ಮಾಡುತ್ತಿದ್ದಾರೆ. ನನಗೆ ತೊಂದರೆಯಾಗುತ್ತಿರುವ ಬಗ್ಗೆ ನಾನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಾಗುವುದಿಲ್ಲ,. ಆದರೆ ಸಮಯ ಬಂದಾಗ ಬೇರೆಡೆ ಹೇಳಿಕೊಳ್ಳುತ್ತೇನೆ ಎಂದು ಇದೇ ವೇಳೆ ಸಿಪಿವೈ ತಿಳಿಸಿದರು.