ಬೆಂಗಳೂರು, ಆ 24 (DaijiworldNews/DB): ಸರ್ಕಾರಿ ಟೆಂಡರ್ ನೀಡುವುದಾಗಿ ಮಹಿಳೆಯ ಗ್ಯಾಂಗ್ವೊಂದು ಉದ್ಯಮಿಯ ಪುತ್ರನನ್ನು ಅಪಹರಿಸಿ 4 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪುಷ್ಪಾ, ಅಯ್ಯಪ್ಪ, ರಾಕೇಶ್ ಹಾಗೂ ಸಂತೋಷ್ ಎಂದು ಗುರುತಿಸಲಾಗಿದೆ. ಉದ್ಯಮಿ ರವಿ ಎಂಬವರ ಪುತ್ರ ಸೂರಜ್ ಅಪಹರಣಕ್ಕೊಳಗಾದಾತ. ಮಹಿಳಾ ಗ್ಯಾಂಗ್ವೊಂದು ಸರ್ಕಾರಿ ಕೆಲಸದ ಟೆಂಡರ್ ಕೊಡಿಸುವುದಾಗಿ ಸೂರಜ್ನನ್ನು ಕರೆಸಿಕೊಂಡಿತ್ತು. ಬಳಿಕ ಆತನ ಅವರು ತಿಳಿಸಿದ ಸ್ಥಳಕ್ಕೆ ಹೋದಾಗ ಆತನಿಗೆ ಪಿಸ್ತೂಲ್ ತೋರಿಸಿ, ಹಲ್ಲೆ ನಡೆಸಿ ಅಪಹರಣ ಮಾಡಿದ್ದಾರೆ. 4 ಕೋಟಿ ರೂ.ಗಳನ್ನು ನೀಡಬೇಕು. ಇಲ್ಲವಾದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಗ್ಯಾಂಗ್ ಬೆದರಿಕೆಯೊಡ್ಡಿದೆ. ನನ್ನ ಬಳಿ ಅಷ್ಟು ಹಣವಿಲ್ಲ, ಬಿಟ್ಟುಬಿಡಿ ಎಂಬುದಾಗಿ ಸೂರಜ್ ಹೇಳಿದಾಗ 25 ಲಕ್ಷ ರೂ. ನೀಡುವಂತೆ ಗ್ಯಾಂಗ್ ಒತ್ತಾಯಿಸಿದೆ. ಬಳಿಕ ಸ್ನೇಹಿತ ಗುರುಮೂರ್ತಿಗೆ ತಿಳಿಸಿ ಸೂರಜ್ 25 ಲಕ್ಷ ರೂ. ತರಿಸಿದ್ದಾರೆ.
ಪುತ್ರನನ್ನು ಅಪಹರಣ ಮಾಡಲಾಗಿದೆ ಎಂದು ಉದ್ಯಮಿ ರವಿ ಅವರು ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.