ನವದೆಹಲಿ, ಆ 24 (DaijiworldNews/MS): ಕೋವಿಡ್ -19 ಸಾಂಕ್ರಾಮಿಕ ವೇಳೆ ತಮ್ಮ ಬಿಹಾರ ಮೂಲದ ಕಾರ್ಮಿಕರನ್ನು ಮನೆಗೆ ಕಳುಹಿಸಲು ವಿಮಾನ ಮೂಲಕ ಕಳುಹಿಸಿಕೊಟ್ಟು ದೇಶದ ಗಮನ ಸೆಳೆದಿದ್ದದೆಹಲಿ ಮೂಲದ ರೈತ ಪಪ್ಪನ್ ಸಿಂಗ್ ಗಹ್ಲೋಟ್ ಮಂಗಳವಾರ ಹೊರ ಉತ್ತರ ದೆಹಲಿಯ ತಿಗಿಪುರ್ ಗ್ರಾಮದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಅಧಿಕಾರಿಗಳು, ಪಪ್ಪನ್ ಅವರ ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪೊಲೀಸರಿಗೆ ಡೆತ್ನೋಟ್ ಕೂಡಾ ಲಭ್ಯವಾಗಿದೆ. ತಾವು ಬಳಲುತ್ತಿರುವ ಅನಾರೋಗ್ಯವನ್ನು ಉಲ್ಲೇಖಿಸಿದ್ದು ತಮ್ಮ ಕೃತ್ಯಕ್ಕೆ ತಾವೇ ಜವಾಬ್ದಾರರು ಎಂದು ಬರೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ.
ರೈತನಾಗಿದ್ದ ಪಪ್ಪನ್ ಸಿಂಗ್ ಅಣಬೆಗಳನ್ನು ಬೆಳೆಸುತ್ತಿದ್ದರು. ಮೇ 2020 ರಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ವ್ಯಾಪಿಸಿದಾಗ ತಮ್ಮ ಕಾರ್ಮಿಕರನ್ನು ವಿಮಾನದ ಮೂಲಕ ಮನೆಗೆ ಕಳುಹಿಸಿದ್ದರು. ಅಲ್ಲದೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ಮರಳಿ ಕರೆಸಿಕೊಂಡಿದ್ದರು. ಅನೇಕರು ಇವವರನ್ನು ದೆಹಲಿಯ ಸೋನು ಸೂದ್ ಎಂದು ಕರೆಯುತ್ತಿದ್ದರು. ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕೂಡ ಅವರ ಕಥೆಯನ್ನು ರೇಡಿಯೊದಲ್ಲಿ ಓದಿದ್ದರು.
ಗಹ್ಲೋಟ್ ಅವರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.