ಬೆಂಗಳೂರು, ಆ 24 (DaijiworldNews/DB): ದೋಷ ನಿವಾರಣೆ ನೆಪದಲ್ಲಿ ನಕಲಿ ಸ್ವಾಮೀಜಿಯೊಬ್ಬ ಯುವತಿಯೊಬ್ಬಳ ಮೇಲೆ ಐದಾರು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿ ಲಕ್ಷಾಂತರ ರೂ. ಹಣ ಪೀಕಿಸಿದ್ದಲ್ಲದೆ, ಚಿತ್ರಹಿಂಸೆ ನೀಡಿದ ಘಟನೆ ರಾಜಧಾನಿಯಲ್ಲಿ ನಡೆದಿದೆ. ಈತನ ಕುಕೃತ್ಯಕ್ಕೆ ಪತ್ನಿಯೂ ಸಾಥ್ ನೀಡಿದ್ದು, ವಿಷಯ ಬಹಿರಂಗವಾಗುತ್ತಿದ್ದಂತೆ ಇಬ್ಬರೂ ನಾಪತ್ತೆಯಾಗಿದ್ದಾರೆ.
ಆವಲಹಳ್ಳಿ ಇರಂಡನಹಳ್ಳಿಯ ಆನಂದಮೂರ್ತಿ ಮತ್ತು ಆತನ ಪತ್ನಿ ಲತಾ ಚಿತ್ರಹಿಂಸೆ ನೀಡಿ ನಾಪತ್ತೆಯಾದವರು. ದಂಪತಿ ವಿರುದ್ದ ಕೆ.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡ ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಘಟನೆ?
ಸುಮಾರು ಐದಾರು ವರ್ಷಗಳ ಹಿಂದೆ ಸಂಬಂಧಿಯೊಬ್ಬರ ಮನೆಯಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದ ಸಂತ್ರಸ್ತ ಯುವತಿಯ ಪೋಷಕರಿಗೆ ನಕಲಿ ಸ್ವಾಮೀಜಿ ಆನಂದಮೂರ್ತಿ ಪರಿಚಯವಾಗಿತ್ತು. ಆಗ ನಿಮ್ಮ ಮಗಳಿಗೆ ದೋಷವಿದ್ದು, ಕೆಲವು ಪೂಜೆಗಳ ಮುಖಾಂತರ ದೋಷ ನಿವಾರಣೆ ಮಾಡದಿದ್ದರೆ ಕುಟುಂಬಕ್ಕೆ ಕಂಠಕವಿದೆ ಎಂದಿದ್ದ. ಆತನ ಮಾತು ನಂಬಿದ ಯುವತಿ ಪೂಜೆಗಾಗಿ ಆತನ ಮನೆಗೆ ಹೋಗಿದ್ದಳು. ಈ ವೇಳೆ ಮತ್ತು ಬರುವ ಔಷಧವನ್ನು ಪಾನೀಯದಲ್ಲಿ ಬೆರೆಸಿ ಆಕೆಗೆ ಕುಡಿಸಿ ಪ್ರಜ್ಞೆ ತಪ್ಪಿಸಿದ ಆನಂದಮೂರ್ತಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವೇಳೆ ಆತನ ಪತ್ನಿ ಇದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಳು. ಎಚ್ಚರವಾದಾಗ ಅರೆಬೆತ್ತಲೆ ಸ್ಥಿತಿಯಲ್ಲಿದ್ದದ್ದನ್ನು ನೋಡಿದ ಯುವತಿ ಈ ಕುರಿತು ಪ್ರಶ್ನಿಸಿದಾಗ ವಿಷಯ ಬಹಿರಂಗಪಡಿಸಿದರೆ ಪೋಷಕರು ಮತ್ತು ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ. ಆ ಬಳಿಕ ಹಂತ ಹಂತವಾಗಿ ಆಕೆಯಿಂದ 2.50 ಲಕ್ಷ ರೂ.ಗಳನ್ನು ವಸೂಲಿ ಮಾಡಿಕೊಂಡಿದ್ದ. ಅಲ್ಲದೆ ದೀಕ್ಷೆ ಕೊಡಿಸುವುದಾಗಿ ಪುಸಲಾಯಿಸಿ ಮತ್ತೆ ದೌರ್ಜನ್ಯ ಎಸಗಿದ್ದ.
ಇತ್ತೀಚೆಗೆ ಆಕೆಗೆ ಪೋಷಕರು ವಿವಾಹ ನಿಶ್ಚಯ ಮಾಡಿದ್ದರು. ಇದನ್ನು ತಿಳಿದುಕೊಂಡ ಆನಂದಮೂರ್ತಿ ಆಕೆಯನ್ನು ವಿವಾಹವಾಗಲಿದ್ದ ಯುವಕನನ್ನು ಭೇಟಿಯಾಗಿ ಖಾಸಗಿ ಫೋಟೋಗಳನ್ನು ತೋರಿಸಿ ಮದುವಡ ನಿಲ್ಲಿಸಿದ್ದ. ಬಳಿಕ ಪೋಷಕರು ವಿಚಾರಿಸಿದಾಗ ನಕಲಿ ಸ್ವಾಮೀಜಿ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಹೇಳಿಕೊಂಡಿದ್ದಾಳೆ. ಇದರಿಂದ ಆತಂಕಗೊಂಡ ಪೋಷಕರು ನಕಲಿ ಸ್ವಾಮೀಜಿ ದಂಪತಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.