ದಾವಣಗೆರೆ, ಆ 24 (DaijiworldNews/MS): ಮೆಕ್ಕೆಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಚಿರತೆ ದಾಳಿ ಮಾಡಿದ ಆಕೆಯನ್ನು ಕೊಂದು ಹಾಕಿದ ಘಟನೆ ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಮಲಿಬಾಯಿ ಮಂಗಳವಾರ ಸಂಜೆ ೬ ಗಂಟೆ ವೇಳೆಗೆ ಮೆಕ್ಕೆಜೋಳದ ಹೊಲದಲ್ಲಿ ಕಳೆ ತೆಗೆಯುತ್ತಿದ್ದಾಗ ಹೊಂಚು ಹಾಕಿ ದಾಳಿ ಮಾಡಿದ ಚಿರತೆ ಕೂಗಿಕೊಳ್ಳಲು ಆಸ್ಪದ ನೀಡದೆ ಕುತ್ತಿಗೆಗೆ ಬಾಯಿ ಹಾಕಿ ಒಂದು ಕಿಲೋಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿ ರಕ್ತ ಹೀರಿ ಬಳಿಕ ಅಲ್ಲಿಂದ ತೆರಳಿದೆ. . ಕಮಲಿಬಾಯಿ ಕಾಣದಿದ್ದಾಗ ಮನೆಯವರು ಹುಡುಕಾಟ ನಡೆಸಿದ್ದಾರೆ. 1 ಕಿಮೀ ದೂರದಲ್ಲಿ ಮೃತದೇಹ ಕಂಡುಬಂದಿದೆ.
ಕಳೆದ ಆರೇಳು ತಿಂಗಳಿನಿಂದಲೂ ಈ ಭಾಗದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳನ್ನು ಹಿಡಿಯಲು ಪಂಜರ ಇಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರೂ ಅರಣ್ಯ ಇಲಾಖೆ ಸ್ಪಂದಿಸದ ಹಿನ್ನೆಲೆಯಲ್ಲಿ ಅಮಾಯಕ ಕಮಲಿ ಬಾಯಿ ಚಿರತೆಗೆ ಆಹಾರವಾಗಿದ್ದಾರೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.