ನವದೆಹಲಿ, ಆ 23 (DaijiworldNews/MS): ಪಾಕಿಸ್ತಾನ ಗಡಿಯತ್ತ ಆಕಸ್ಮಿಕವಾಗಿ ಬ್ರಹ್ಮೋಸ್ ಕ್ಷಿಪಣಿ ಸಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಮೂವರು ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ.ಈ ಬಗ್ಗೆ ಮಂಗಳವಾರ ವಾಯುಪಡೆಯುವ ಪ್ರಕಟಣೆಯಲ್ಲಿ ತಿಳಿಸಿದೆ.
2022ರ ಮಾರ್ಚ್ 9ರಂದು ಬ್ರಹ್ಮೋಸ್ ಕ್ಷಿಪಣಿಯು ಆಕಸ್ಮಿಕವಾಗಿ ಉಡಾವಣೆಗೊಂಡು ಪಾಕಿಸ್ತಾನದ ನೆಲದಲ್ಲಿ ಅಪ್ಪಳಿಸಿತ್ತು. ಅಲ್ಲದೇ ಕ್ಷಿಪಣಿ ಅಪ್ಪಳಿಸಿದ ಬೆನ್ನಲ್ಲೇ ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಸ್ಲಾಮಾಬಾದ್ನಲ್ಲಿ ಭಾರತದ ರಾಯಭಾರಿಯನ್ನು ಕರೆಸಿಕೊಂಡು ಪ್ರತಿಭಟನೆ ಮಾಡಿತ್ತು. ಇದರಿಂದ ವಿಮಾನ ಅಥವಾ ಸಾರ್ವಜನಿಕರ ಜೀವಗಳಿಗೆ ಹಾನಿಯಾಗುವ ಸಾಧ್ಯತೆ ಇತ್ತುಎಂದು ಆರೋಪಿಸಿತ್ತು.
ಮಾ.9ರಂದು ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ನಡೆಸಲಾಗಿದ್ದ ಕೋರ್ಟ್ ಆಫ್ ಎನ್ಕ್ವಯರಿ ಮುಕ್ತಾಯಗೊಂಡ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ತಕ್ಷಣದಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
"ನಿರ್ದಿಷ್ಟ ಕಾರ್ಯಾಚರಣೆ ವಿಧಾನದಲ್ಲಿ ತಪ್ಪಾಗಿರುವು ಹಾಗೂ ಮೂವರು ಅಧಿಕಾರಿಗಳ ತಪ್ಪಿನಿಂದಾಗಿ ಆಕಸ್ಮಿಕವಾಗಿ ಕ್ಷಿಪಣಿಯು ಉಡಾವಣೆಯಾಗಿದೆ ತಿಳಿದು ಬಂದಿದೆ" ಎಂದು ವಾಯುಪಡೆಯು ಪ್ರಕಟಿಸಿದೆ.