ಬೆಂಗಳೂರು, ಆ 23 (DaijiworldNews/DB): ಧರ್ಮಾಧಾರಿತ ರಾಜಕಾರಣವೇ ಬಿಜೆಪಿಯ ಕೆಲಸವಾಗಿದೆ. ಆ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ಆ ಪಕ್ಷ ನಿರತವಾಗಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.
ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಬಿಜೆಪಿ ವಿರುದ್ದ ಹರಿಹಾಯ್ದರು. ಬಿಜೆಪಿ ಜನಪರ ಯೋಜನೆಗಳ ಅನುಷ್ಠಾನದ ಮೂಲಕ ಅದನ್ನಾಧರಿಸಿ ಮತ ಕೇಳಬೇಕು. ಮಾಂಸಾಹಾರ, ದೇವರು, ಧರ್ಮದ ಹೆಸರಿನಲ್ಲಲ್ಲ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ. ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಈ ಲೋಪಗಳನ್ನು ಅಡಗಿಸಿಟ್ಟುಕೊಳ್ಳಲು ಸಿದ್ದರಾಮಯ್ಯರ ಮಾಂಸಾಹಾರ ಸೇವನೆ ಕುರಿತು ವಿವಾದ ಹೊರ ಹಾಕುತ್ತಿದೆ. ದೇಶದ ಹಲವು ದೇವಾಲಯಗಳಲ್ಲಿಮಾಂಸಾಹಾರವನ್ನೇ ನೈವೇದ್ಯವಾಗಿಯೂ ಮಾಡುವುದಿದೆ. ಆದರೆ ಈ ವಿಚಾರದಲ್ಲಿ ಬಿಜೆಪಿ ವೃಥಾ ವಿವಾದ ಸೃಷ್ಟಿಸುತ್ತಿದೆ ಎಂದು ಕಿಡಿ ಕಾರಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ವಿವಾದಗಳನ್ನು ಸೃಷ್ಟಿಸಿ ಜನರನ್ನು ಗೊಂದಲಕ್ಕೆ ತಳ್ಳುವ ಕೆಲಸ ಬಿಜೆಪಿಯದ್ದು. ಆ ಮೂಲಕ ಸರ್ಕಾರವೇ ಶಾಂತಿಭಂಗಕ್ಕೆ ಕಾರಣವಾಗುತ್ತಿದೆ. ಬಿಜೆಪಿಗೆ ತಾಕತ್ತಿದ್ದರೆ ಮಾಂಸಾಹಾರ ಸೇವನೆ ಮಾಡುವವರ ಮತ ನಮಗೆ ಬೇಡ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಮಾಜಿ ಮೇಯರ್ ರಾಮಚಂದ್ರಪ್ಪ ಮಾತನಾಡಿ, ಬಿಜೆಪಿ ಚುನಾವಣೆ ಸನಿಹವಾಗುತ್ತಿದ್ದಂತೆ ಗಿಮಿಕ್ ಮಾಡಿ ಜನರನ್ನು ಸೆಳೆಯಲು ಯತ್ನಿಸುತ್ತಿದೆ. ದೇವರು, ಧರ್ಮ ಯಾವುದಕ್ಕೂ ಬೆಲೆ ಕೊಡುವ ಗುಣ ಅವರಲ್ಲಿಲ್ಲ ಎಂದು ಆಪಾದಿಸಿದರು.