ನವದೆಹಲಿ, ಆ 23 (DaijiworldNews/DB): ಸರ್ಕಾರವು ಸರಿಯಾದ ಸಮಯಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದೇ ದೊಡ್ಡ ಸಮಸ್ಯೆಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮುಂಬೈಯ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ವತಿಯಿಂದ ನಡೆದ ನ್ಯಾಟ್ಕಾನ್-2022 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಯ ಎಂಬುದು ಅತಿದೊಡ್ಡ ಬಂಡವಾಳ, ನಿರ್ಮಾಣ ಕ್ಷೇತ್ರದಲ್ಲಿ ಇದು ಅಗತ್ಯವಾಗಿ ಬೇಕು. ತಾಂತ್ರಿಕತೆ ಮತ್ತು ಸಂಪನ್ಮೂಲಗಳಿಗಿಂತಲೂ ಸಮಯ ಪ್ರಾಮುಖ್ಯವಾಗಿದೆ. ಆದರೆ ಸರ್ಕಾರ ಸೂಕ್ತ ಕಾಲದಲ್ಲಿ ನಿರ್ಧಾರ ತೆಗೆದುಕೊಳ್ಳದಿರುವುದೇ ಈಗ ಇರುವ ದೊಡ್ಡ ಸಮಸ್ಯೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಭಾರತದಲ್ಲಿ ಮೂಲ ಸೌಕರ್ಯಗಳ ವಿಭಾಗದಲ್ಲಿ ಭವಿಷ್ಯ ವಿಶಾಲವಾಗಿದೆ. ಈ ಕ್ಷೇತ್ರದಲ್ಲಿ ಅದ್ವಿತೀಯವಾದದನ್ನೇ ಮಾಡಬಹುದು. ಉತ್ತಮ ತಾಂತ್ರಿಕತೆ, ಒಳ್ಳೆಯ ಅನ್ವೇಷಣೆ, ಸಂಶೋಧನೆ ಮತ್ತು ವಿಶ್ವ ಮತ್ತು ದೇಶದಲ್ಲಿರುವ ಯಶಸ್ವೀ ಸಾಧ್ಯತೆಗಳನ್ನು ಬಳಸಿಕೊಂಡರೆ ಇದು ಸಾಧ್ಯ ಎಂದರು.
ಕೇಂದ್ರ ಸರ್ಕಾರವು ಬಂಗಾರದ ಯುಗದಲ್ಲಿದ್ದು, ಯಶಸ್ಸಿನ ಮೈಲುಗಲ್ಲು ದಾಟಿದೆ ಎಂದು ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು. ಆದರೆ ಇದೀಗ ಗಡ್ಕರಿ ಹೇಳಿಕೆಗೂ ಪ್ರಧಾನಿ ಹೇಳಿಕೆಗೂ ಸಾಮ್ಯತೆ ಇಲ್ಲದಂತಾಗಿದೆ. ಆದರೆ ಗಡ್ಕರಿ ಹೇಳಿಕೆ ಸರ್ಕಾರವನ್ನು ಉದ್ದೇಶಿಸಿಯಲ್ಲ, ಸಾಮಾನ್ಯ ವಿಚಾರಾಧಾರಿತವಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.