ಗೋವಾ, ಆ 23 (DaijiworldNews/DB): ಭಾರತೀಯ ಜನತಾ ಪಕ್ಷದ ನಾಯಕಿ ಸೋನಾಲಿ ಫೋಗಟ್ ಸಾವು ಸಹಜ ಸಾವಲ್ಲ. ಇದೊಂದು ವ್ಯವಸ್ಥಿತ ಕೊಲೆ ಎಂದು ಸೋನಾಲಿ ಹಿರಿಯ ಸಹೋದರಿ ರಾಮನ್ ಫೋಗಟ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ರಾತ್ರಿ 11 ಗಂಟೆಗೆ ಸೋನಾಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಊಟ ಮಾಡಿದ ಬಳಿಕ ಸಂಕಟವಾಗುತ್ತಿದೆ ಎಂಬುದಾಗಿ ತಾಯಿಗೆ ಫೋನ್ ಮಾಡಿ ಹೇಳಿದ್ದರು. ಬೆಳಗ್ಗೆ ವೈದ್ಯರ ಬಳಿ ಹೋಗಿ ಔಷಧಿ ಪಡೆದುಕೊಳ್ಳೋಣ ಎಂದು ಹೇಳಿ ಸಮಾಧಾನಪಡಿಸಿದ್ದೆವು. ಆದರೆ ಬೆಳಗ್ಗೆ ವೇಳೆಗೆ ಅವರು ಮೃತಪಟ್ಟಿರುವ ಸುದ್ದಿ ಕೇಳಿ ಅಚ್ಚರಿಯಾಯಿತು. ರಾತ್ರಿ ಅವರು ಸೇವಿಸಿದ ಊಟದಲ್ಲಿಯೇ ಏನೋ ಅನುಮಾನವಿದೆ. ಇದೊಂದು ವ್ಯವಸ್ಥಿತ ಕೊಲೆ ಎಂದವರು ಶಂಕಿಸಿದ್ದಾರೆ.
41 ವರ್ಷ ವಯಸ್ಸಿನ ಸೋನಾಲಿ ಗೋವಾದಲ್ಲಿ ಹೃದಯಾಘಾತಕ್ಕೊಳಗಾಗಿ ಸೋಮವಾರ ರಾತ್ರಿ ಸಾವನ್ನಪ್ಪಿದ್ದರು. ಅವರ ಪತಿ ಸಂಜಯ್ 2016 ರಲ್ಲಿ ಹರಿಯಾಣದ ತಮ್ಮ ಫಾರ್ಮ್ಹೌಸ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಇವರಿಗೆ ಯಶೋಧರ ಫೋಗಟ್ ಹೆಸರಿನ ಮಗಳಿದ್ದಾಳೆ. ಟಿಕ್ಟಾಕ್ ವೀಡಿಯೋಗಳ ಮೂಲಕ ಸೋನಾಲಿ ಹೆಚ್ಚು ಪ್ರಸಿದ್ದರಾಗಿದ್ದರು. 2019ರಲ್ಲಿ ಬಿಜೆಪಿ ಸೇರ್ಪಡೆಗೊಂಡ ಅವರು, ಹರಿಯಾಣ ಚುನಾವಣೆಯಲ್ಲಿ ಆದಂಪುರ ವಿಧಾನಸಭಾ ಕ್ಷೇತ್ರದಿಂದ ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.