ಬೆಂಗಳೂರು, ಆ 23 (DaijiworldNews/DB): ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಆರೋಪ ನಿರಾಧಾರ. ಪಾರದರ್ಶಕವಾಗಿಯೇ ಪರೀಕ್ಷೆ ನಡೆದಿದೆ. ಅಲ್ಲದೆ ಪರೀಕ್ಷೆ ನಿಯಮ ಉಲ್ಲಂಘಿಸಿದ್ದಕ್ಕೆ ಇಲಾಖೆಯೇ 63 ಮಂದಿ ಅಭ್ಯರ್ಥಿಗಳ ಫಲಿತಾಂಶ ತಡೆ ಹಿಡಿದಿದೆ. ಯಾವುದೇ ಅಕ್ರಮಗಳು ಶಿಕ್ಷಕರ ನೇಮಕಾತಿಯಲ್ಲಿ ನಡೆದಿಲ್ಲ ಎಂದರು.
ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ದಿನಕ್ಕೊಂದು ಮಾಹಿತಿಗಳು ಹೊರ ಬೀಳುತ್ತಿರುವ ಬೆನ್ನಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ವಾಮ ಮಾರ್ಗದ ಮೂಲಕ ನೇಮಕ ಆದೇಶ ನೀಡಲಾಗಿದೆ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಆರೋಪಿಸಿತ್ತು.