ಲಕ್ನೋ, ಆ 23 (DaijiworldNews/DB): ಉತ್ತರ ಪ್ರದೇಶದ ಲಕ್ನೋದಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಂ ಉಂಟಾದ ವೇಳೆ ಸಮಯವನ್ನು ಬಳಸಿಕೊಂಡು17 ವರ್ಷದ ಬಾಲಕಿಯೊಬ್ಬಳು ಮಾನವ ಕಳ್ಳಸಾಗಣೆದಾರರಿಂದ ಉಪಾಯದಿಂದ ಬಚಾವಾಗಿದ್ದಾಳೆ.
ಮಾನವ ಕಳ್ಳಸಾಗಣೆದಾರರು ಕುಶಿನಗರದಲ್ಲಿರುವ ಆಕೆಯ ಸಂಬಂಧಿಯೊಬ್ಬರ ಮನೆಯಿಂದ ಬಾಲಕಿಯನ್ನು ಎತ್ತಿಕೊಂಡು ಬಂದಿದ್ದು, ಬದೌನ್ಗೆ ಒಯ್ಯುತ್ತಿದ್ದರು. ಬಾಲಕಿಯನ್ನು ವಾಹನದ ಹಿಂಬದಿ ಸೀಟ್ನಲ್ಲಿ ಕುಳ್ಳಿರಿಸಲಾಗಿತ್ತು. ಟ್ರಾಫಿಕ್ ಜಾಂ ಉಂಟಾದ ವೇಳೆ ಆಕೆ ಕೆಲವು ಪೊಲೀಸರನ್ನು ನೋಡಿ ಕೂಡಲೇ ಕಿರುಚಿ ಅವರನ್ನು ಕರೆದಿದ್ದಾಳೆ. ಅಪಾಯದ ಮುನ್ಸೂಚನೆ ಅರಿತ ಪೊಲೀಸರು ತತ್ಕ್ಷಣ ಕಾರ್ಯಾಚರಣೆಗಿಳಿದು ವಾಹನವನ್ನು ತಪಾಸಣೆ ನಡೆಸಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ವಾಹನದಲ್ಲಿದ್ದವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಬಾಲಕಿ ನಡೆದ ಎಲ್ಲಾ ವಿಚಾರಗಳನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಸತ್ಯೇಂದ್ರ ಬಹದ್ದೂರ್ ಸಿಂಗ್ ನೀಡಿದ ಮಾಹಿತಿ ಪ್ರಕಾರ, ಕರ್ತವ್ಯನಿರತರಾಗಿದ್ದ ವೇಳೆ ಬಾಲಕಿಯೊಬ್ಬಳು ಸಹಾಯಕ್ಕಾಗಿ ಕೂಗುತ್ತಿರುವುದು ಕೇಳಿಸಿತ್ತು. ನಾವು ಆಕೆಯಿದ್ದ ವಾಹನವನ್ನು ಕೂಡಲೇ ಸುತ್ತುವರೆದು ಆಕೆಯನ್ನು ಹೊರ ಬರುವಂತೆ ಹೇಳಿದೆವು. ಆಕೆಯ ಸಂಬಂಧಿ ಆಕೆಯನ್ನು ಎಸ್ಯುವಿ ವಾಹನದೊಳಗೆ ಇತರ ನಾಲ್ವರು ಪ್ರಯಾಣಿಕರೊಂದಿಗೆ ಕುಳಿತುಕೊಳ್ಳಲು ಒತ್ತಾಯಿ ಮಾಡಿದ್ದರ ಬಗ್ಗೆ ಆಕೆ ನಮಗೆ ವಿವರಿಸಿದಳು. ಈ ವಾಹನದಲ್ಲಿ ಓರ್ವ ಮಹಿಳೆಯೂ ಇದ್ದು, ನನಗೆ ಇಚ್ಚೆ ಇಲ್ಲದಿದ್ದರೂ ಬದೌನ್ಗೆ ಒತ್ತಾಯಪೂರ್ವಕವಾಗಿ ಕರೆದೊಯ್ಯುತ್ತಿದ್ದರು ಎಂದು ಬಾಲಕಿ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
ಎಸ್ಯುವಿಯಲ್ಲಿದ್ದ ನಾಲ್ವರು ಆಶಾ ಗೌತಮ್, ಕರಣ್ ಗೌತಮ್, ಓಂ ಪಾಲ್ ಹಾಗೂ ಪಂಚು ರಾಮ್ ಶರ್ಮ ಎಂಬುದಾಗಿ ಅವರೇ ಹೇಳಿಕೊಂಡಿದ್ದಾರೆ. ಬಾಲಕಿಯನ್ನು ಆಕೆಯ ಸಂಬಂಧಿಯಿಂದ 80 ಸಾವಿರ ರೂ. ನೀಡಿ ಪಡೆದುಕೊಳ್ಳಲಾಗಿತ್ತು. ಬದೌನ್ನಲ್ಲಿ ವ್ಯಕ್ತಿಯೊಬ್ಬನಿಗೆ ಮದುವೆಯಾಗುವುದಕ್ಕಾಗಿ ಆಕೆಯನ್ನು ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಸೈಯದ್ ಅಲಿ ಅಬ್ಬಾಸ್ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಬಾಲಕಿ ತಿಳಿಸಿದ ಪ್ರಕಾರ ಆಕೆಯ ತಂದೆ ವಿಕಲಚೇತನನಾಗಿದ್ದು, ಆತನ ಎರಡನೇ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ಬಾಲಕಿಯನ್ನು ಆಕೆಯ ಸಂಬಂಧಿಯ ಮನೆಯಲ್ಲಿ ಜೀವಿಸಲು ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ.