ಬಾಗಲಕೋಟೆ, ಆ 23 (DaijiworldNews/DB): ಬಿಜೆಪಿ ಸೇರಿದರೆ ನಿಮಗೆ ಯಾವುದೇ ತೊಂದರೆಯಾಗದು ಎಂದು ನನಗೆ ಪರೋಕ್ಷವಾಗಿ ಆಫರ್ ನೀಡಿದ್ದರು ಎಂದು ಎಎಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಬಿಜೆಪಿ ವಿರುದ್ದ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜೀನಾಮೆ ನೀಡಿ ವರ್ಷವಾದರೂ ಇನ್ನೂ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಯಾವುದಾದರೂ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವುದಕ್ಕಾಗಿಯೇ ಈ ರೀತಿ ಮಾಡುತ್ತಿದ್ದಾರೆ. ಬಿಜೆಪಿ ಸೇರಿದರೆ ತೊಂದರೆಯಾಗದು ಎಂದು ಮೊದಲೇ ನನಗೆ ಪರೋಕ್ಷವಾಗಿ ಹೇಳಿದ್ದರು ಎಂದರು.
ಕಳೆದ ವರ್ಷ ಸೆಪ್ಟಂಬರ್ 16ರಂದು ಪೊಲೀಸ್ ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಆಲ್ ಇಂಡಿಯಾ ಸರ್ವಿಸಸ್ ಪ್ರಕಾರ ನನ್ನ ಪಿಂಚಣಿ ಸಿದ್ದಪಡಿಸಿ ನೀಡಿ ಎಂದು 15 ಬಾರಿ ಮೌಖಿಕವಾಗಿ ಮತ್ತು ನಾಲ್ಕು ಬಾರಿ ಪತ್ರ ಮುಖೇನ ಸಿಎಂಗೆ ಮನವಿ ಮಾಡಿದ್ದೇನೆ. ಆದರೆ ಇನ್ನೂ ರಾಜೀನಾಮೆಯನ್ನೇ ಅಂಗೀಕರಿಸಿಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಏಳು ದಶಕದಲ್ಲಿ ಕಾಂಗ್ರೆಸ್ನವರು ದೇಶದಲ್ಲಿ ಲೂಟಿ ಮಾಡಿದ್ದನ್ನು ಬಿಜೆಪಿಯವರು ಏಳು ವರ್ಷದಲ್ಲಿ ಮಾಡಿದ್ದಾರೆ. ದೇಶಾದ್ಯಂತ ಆತಂಕದ ಸ್ಥಿತಿಯನ್ನು ನಿರ್ಮಿಸಿದ ಖ್ಯಾತಿ ಅವರದು. ಕಿಸೆಯಲ್ಲಿ ಐದು ರೂ. ಇದ್ದರೂ ಎಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬರುತ್ತಾರೆ ಎಂದು ಆತಂಕದಿಂದಲೇ ದಿನ ದೂಡುವಂತಾಗಿದೆ ಎಂದವರು ವಿಷಾದ ವ್ಯಕ್ತಪಡಿಸಿದರು.
ಇನ್ನಷ್ಟು ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿ ನಿಮ್ಮೊಂದಿಗೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ನಿಮಗೇ ಎಲ್ಲ ಗೊತ್ತಾಗುತ್ತದೆ. ಈಗಲೇ ಅವರ ಹೆಸರು ಹೇಳಿದರೆ ಸರ್ಕಾರ ಅವರನ್ನು ಬಿಡುವುದಿಲ್ಲ. ಸ್ವಾಭಿಮಾನ ಇರುವವರು ಯಾರೂ ಕೂಡಾ ಸರ್ಕಾರದಲ್ಲಿ ಉಳಿಯುವುದಿಲ್ಲ. ಎಲ್ಲಾ ಕಡೆಗೂ 40, 50 ಪರ್ಸೆಂಟ್ ಹಣ ನೀಡಿ ಎಂದರೆ ಸ್ವಾಭಿಮಾನ ಇರುವವರಿಗೆ ಕಷ್ಟವೇ. ಸರ್ಕಾರಿ ಉದ್ಯೋಗ ಬೇಡ, ರಾಜಕೀಯಕ್ಕೆ ಬರಬೇಕು ಎಂದು ಹಲವರಿಗೆ ಅನಿಸಿದೆ ಎಂದರು.
ಸರ್ಕಾರದ ಆಂತರಿಕ ಮಾಹಿತಿ ನನ್ನ ಬಳಿ ಸಾಕಷ್ಟಿದೆ. ಸಮಯ, ಸಂದರ್ಭ ಬಂದಾಗ ಬಹಿರಂಗಪಡಿಸುತ್ತೇನೆ ಎಂದ ಅವರು, ನಾನು ಯಾವುದನ್ನೂ ವೈಯಕ್ತಿಕ ಲಾಭಕ್ಕಾಗಿ ಹೇಳುವುದಿಲ್ಲ. ಆದರೆ ನನಗೆ ಸಮಸ್ಯೆ ಎದುರಾದಾಗ ರಕ್ಷಣೆಗಾಗಿ ಹೇಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.