ಮೈಸೂರು, ಆ 23 (DaijiworldNews/MS): 'ಸಾವರ್ಕರ್ ರಥಯಾತ್ರೆ'ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, "ಚಿಲ್ಲರೆ ರಾಜಕಾರಣಕ್ಕಾಗಿ ಸಾವರ್ಕರ್ ಹೆಸರಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ. ಅಂದು ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದಲೇ ಸಾವರ್ಕರ್ ಅವರು ವೀರ ಸಾವರ್ಕರ್ ಎಂದು ಕರೆಸಿ ಕೊಂಡರು. ದೇಶದ ಮೌಲ್ಯಗಳಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಸಾವರ್ಕರ್ ವಿರುದ್ಧ ಅಪಪ್ರಚಾರ ನಡೆಯುತ್ತಿದೆ" ಎಂದು ಬೇಸರಿಸಿಕೊಂಡರು.
"ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ವಿಶೇಷ ಇತಿಹಾಸವಿದೆ. ಮೈಸೂರಿನಂಥ ಪುಣ್ಯ ಭೂಮಿಯಲ್ಲಿ ಸಾವರ್ಕರ್ ರಥ ಯಾತ್ರೆಗೆ ಚಾಲನೆ ನೀಡುತ್ತಿರುವುದು ನನ್ನ ಸೌಭಾಗ್ಯ ಎಂದ ಅವರು, ದೇಶದೊಳಗಿನ ವಿದ್ರೋಹಿಗಳ ಎಚ್ಚರಿಕೆ ನೀಡುವ ರಥಯಾತ್ರೆ ಇದು. ಸಾವರ್ಕರ್ ಚಿಂತನೆಗಳನ್ನು ಮನೆ ಮನೆಗಳಿಗೆ ತಲುಪಿಸಬೇಕು" ಎಂದು ಕರೆ ನೀಡಿದರು.
ಈ ರಥಯಾತ್ರೆಯು ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಲಿದೆ. 24ರಂದು ಎಚ್.ಡಿ.ಕೋಟೆ, ಸರಗೂರು, 25, 26ರಂದು ನಂಜನಗೂಡು ಮೂಲಕ ಚಾಮರಾಜನಗರ ಜಿಲ್ಲೆ, 27ರಿಂದ 29ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ.