ನವದೆಹಲಿ, ಆ 23 (DaijiworldNews/MS): ಭಾರತದ ಪೌರತ್ವ ಸಿಗದೆ ಕಳೆದ 18 ತಿಂಗಳಲ್ಲಿ 1500 ಕ್ಕೂ ಅಧಿಕ ಹಿಂದೂ ನಿರಾಶ್ರಿತರು ಪಾಕಿಸ್ತಾನಕ್ಕೆ ವಾಪಾಸ್ ಹೋಗಿದ್ದಾರೆ ಎಂದು ವರದಿಯಾಗಿದೆ.
ಸ್ವದೇಶದಲ್ಲಿ ಹೆಚ್ಚುತ್ತಿರುವ ದೌರ್ಜನ್ಯದಿಂದಾಗಿ ಪಾಕಿಸ್ತಾನದ ಹಿಂದೂಗಳು ಭಾರತಕ್ಕೆ ಬಂದಿದ್ದರು. ಆದರೆ ನಿರಾಶ್ರಿತರಿಗೆ ಪೌರತ್ವ ನೀಡುವಲ್ಲಿ ಸರ್ಕಾರದ ಕಠಿಣ ನಿಯಮಗಳಿಂದಾಗಿ ಹೆಚ್ಚಿನ ಸಂಖ್ಯೆಯ ನಿರಾಶ್ರಿತರು ಪಾಕಿಸ್ತಾನಕ್ಕೆ ಹಿಂತಿರುಗುತ್ತಿದ್ದಾರೆ. 2022ರ ಜನವರಿಯಿಂದ ಜುಲೈವರೆಗೆ 334 ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
" ಸುಮಾರು 25,000 ಪಾಕಿಸ್ತಾನಿ ಹಿಂದೂಗಳು ಭಾರತೀಯ ಪೌರತ್ವವನ್ನು ಬಯಸುತ್ತಿದ್ದು, ಈ ಪಾಕಿಸ್ತಾನಿ ಹಿಂದೂಗಳು ಕಳೆದ 10 ರಿಂದ 15 ವರ್ಷಗಳಿಂದ ಇಲ್ಲಿದ್ದಾರೆ. 2004 ಮತ್ತು 2005 ರಲ್ಲಿ ಆಯೋಜಿಸಲಾಗಿದ್ದ ಪೌರತ್ವ ಶಿಬಿರಗಳಗಳಲ್ಲಿ ಸುಮಾರು 13,000 ಪಾಕಿಸ್ತಾನಿ ಹಿಂದೂಗಳು ಭಾರತೀಯ ಪೌರತ್ವವನ್ನು ಪಡೆದರು. ಆದರೆ ಕಳೆದ 5 ವರ್ಷಗಳಲ್ಲಿ ಕೇವಲ 2000 ಪಾಕಿಸ್ತಾನಿ ಹಿಂದೂಗಳಿಗೆ ಮಾತ್ರ ಪೌರತ್ವವನ್ನು ನೀಡಲಾಗಿದೆ ಎಂದು ಸಿಮಂತ್ ಲೋಕ ಸಂಘಟನೆ ಅಧ್ಯಕ್ಷ ಹಿಂದೂ ಸಿಂಗ್ ಸೋಧಾ ಹೇಳಿದ್ದಾರೆ.
ಭಾರತ ಸರ್ಕಾರದ ಗೃಹ ಸಚಿವಾಲಯದ ನಿಯಮದ ಪ್ರಕಾರ, ಭಾರತದ ಪೌರತ್ವ ಪಡೆಯಲು ಪಾಕ್ ಪಾಸ್ ಪೋರ್ಟ್ ನವೀಕರಿಸಿ , ಹಿಂದನ್ನು ಹಿಂದಿರುಗಿಸಬೇಕು . ಪಾಕ್ ರಾಯಭಾರ ಕಚೇರಿಯು ಇದರ ಶುಲ್ಕವನ್ನು ಹೆಚ್ಚಿಸಿದೆ, ನಿರಾಶ್ರಿತರು ಅದನ್ನು ಪಾವತಿಸಲು ಕಷ್ಟಪಡುತ್ತಾರೆ. ಪಾಕಿಸ್ತಾನದ ರಾಯಭಾರಿ ಕಚೇರಿಯಲ್ಲಿ ಪಾಸ್ಪೋರ್ಟ್ನ ನವೀಕರಣ ಶುಲ್ಕ 8,000 ರಿಂದ 10,000 ರೂಪಾಯಿಗಳಷ್ಟಿದೆ ಇದು ಕೂಡಾ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಸೋಧಾ ಹೇಳಿದ್ದಾರೆ.