ಪುಣೆ, ಆ 23 (DaijiworldNews/MS): ಸ್ವದೇಶಿ ನಿರ್ಮಿತ ಭಾರತದ ಮೊದಲ ಹೈಡ್ರೋಜನ್ ಬಸ್ ಪುಣೆಯಲ್ಲಿ ಅನಾವರಣವಾಗಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅತ್ಯಾಧುನಿಕ ತಂತ್ರಜ್ಞಾನದ ಹಾಗೂ ಶೂನ್ಯ ಕಾರ್ಬನ್ ಹೂರಸೂಸುವ ಬಸ್ ಅನಾವರಣ ಮಾಡಿದ್ದಾರೆ.
ಹೈಡ್ರೋಜನ್ ಚಾಲಿತ ವಾಹನಗಳು ಹೆಚ್ಚು ಕಡಿಮೆ ಎಲೆಕ್ಟ್ರಿಕ್ ವಾಹನಗಳಂತೆಯೇ ಇರಲಿದ್ದು ಆದರೆ ಇದಕ್ಕೆ ಚಾರ್ಜ್ ಮಾಡಬೇಕಿಲ್ಲ. ಇದು ಹೈಡ್ರೋಜನ್ ಇಂಧನದಿಂದ ಕಾರ್ಯನಿರ್ವಹಸಲಿದೆ. ಹೈಡ್ರೋಜನ್ ಹಾಗೂ ಗಾಳಿಯನ್ನು ಬಳಸಿಕೊಂಡು ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಿದೆ. ಹೈಡ್ರೋಜನ್ ಹಾಕಿದರೆ ಅದು ಆಮ್ಲಜನಕದ ಕಣಗಳೊಂದಿಗೆ ಸೇರಿಕೊಂಡು ವಿದ್ಯುತ್ ತಯಾರಿಸುತ್ತದೆ. ಇದರಿಂದಾಗಿ ಬಸ್ನಲ್ಲಿರುವ ಬ್ಯಾಟರಿ ಚಾರ್ಜ್ ಆಗುತ್ತದೆ. ಇದೇ ಶಕ್ತಿಯಿಂದ ವಾಹನದ ಮೋಟಾರು ಕಾರ್ಯಾರಂಭಗೊಳ್ಳಲಿದೆ.
ಮಹಾರಾಷ್ಟ್ರದ ಪುಣೆಯ ಕೆಪಿಐಟಿ ಸಂಸ್ಥೆ ಕೇಂದ್ರೀಯ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಜತೆಗೂಡಿ ದೇಶದಲ್ಲಿಯೇ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಿದ ಮೊದಲ ಹೈಡ್ರೋಜನ್ ಬಸ್ ಇದಾಗಿದ್ದು ಈ ಬಸ್ ಹೊಗೆ ಬದಲಾಗಿ ನೀರು ಹೊರಹೋಗಲಿದೆ. ನಿರ್ವಹಣಾ ವೆಚ್ಚ ಬಹಳ ಕಡಿಮೆ. ಹೀಗಾಗಿ ಇವು ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಎನಿಸಿಕೊಳ್ಳಲಿವೆ.