ಮುಂಬೈ, ಆ 23 (DaijiworldNews/DB): ಮುಂಬೈನ ಪ್ರಸಿದ್ದ ಸ್ಟಾರ್ ಹೊಟೇಲ್ವೊಂದಕ್ಕೆ ಅಪರಿಚಿತ ಸಂಖ್ಯೆಯಿಂದ ಬಾಂಬ್ ಬೆದರಿಕೆ ಕರೆ ಬಂದಿದ್ದು, 5 ಕೋಟಿ ರೂ.ಗಳಿಗೆ ಬೇಡಿಕೆ ಇಡಲಾಗಿದೆ ಎಂದು ತಿಳಿದು ಬಂದಿದೆ.
ಮುಂಬೈನ ಲಲಿತ್ ಹೊಟೇಲ್ಗೆ ಈ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿಯು ಹೊಟೇಲ್ ಒಳಗೆ ನಾಲ್ಕು ಬಾಂಬ್ಗಳನ್ನು ಇರಿಸಲಾಗಿದೆ. ಬಾಂಬ್ ಸ್ಪೋಟಿಸಬಾರದೆಂದಾದರೆ 5 ಕೋಟಿ ರೂ. ನೀಡಬೇಕು ಎಂದು ಸಿಬಂದಿಗೆ ಬೇಡಿಕೆ ಇಟ್ಟಿದ್ದಾನೆ. ದೂರವಾಣಿ ಕರೆ ಕುರಿತಂತೆ ಹೊಟೇಲ್ ಪ್ರಮುಖರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪರಿಚಿತ ವ್ಯಕ್ತಿ ವಿರುದ್ದ ಐಪಿಸಿ ಸೆಕ್ಷನ್ 336 ಮತ್ತು 507 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಹೊಟೇಲ್ನಲ್ಲಿ ಹುಡುಕಾಟ ನಡೆಸಲಾಗಿದ್ದು, ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆಗಸ್ಟ್ 19 ರಂದು ಮುಂಬೈ ಪೊಲೀಸರಿಗೆ ಪಾಕಿಸ್ತಾನಿ ಸಂಖ್ಯೆಯಿಂದ ಇದೇ ರೀತಿಯ ಕರೆ ಬಂದಿದ್ದು, 26/11 ಮಾದರಿಯಲ್ಲಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಲಾಗಿತ್ತು. ಇದಾದ ಬಳಿಕ ಮಹಾರಾಷ್ಟ್ರದ ರಾಯ್ಗಢ್ ಜಿಲ್ಲೆಯಲ್ಲಿ ಎಕೆ-47 ರೈಫಲ್ಗಳನ್ನು ಹೊಂದಿರುವ ಬೋಟ್ಗಳು ಪತ್ತೆಯಾಗಿತ್ತು.
ಆನಂತರ ಮುಂಬೈಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಬಳಿಕ ಇದು ಆಸ್ಟ್ರೇಲಿಯಾದ ದಂಪತಿಗೆ ಸೇರಿದ್ದಾಗಿದ್ದು, ಎಂಜಿನ್ ತೊಂದರೆಯಿಂದ ದೋಣಿಯನ್ನು ಬಿಟ್ಟು ಹೋಗಲಾಗಿದೆ ಎಂಬ ಮಾಹಿತಿಯನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದರು.