ಗಾಝಿಯಾಬಾದ್, ಆ 23 (DaijiworldNews/DB): ಬಾಲಕನೋರ್ವ ತನ್ನ 13 ವರ್ಷದ ಸ್ನೇಹಿತನ ಕತ್ತು ಸೀಳಿ ಕೊಂದ ಆಘಾತಕಾರಿ ಘಟನೆ ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇಯಲ್ಲಿ ಸೋಮವಾರ ಸಂಜೆ ನಡೆದಿದೆ. ವಿದ್ಯಾಭ್ಯಾಸದಿಂದ ವಿಮುಖನಾಗುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಪೊಲೀಸರ ಪ್ರಕಾರ ಬಾಲಕ ಐದು ತಿಂಗಳಿನಿಂದಲೇ ಸ್ನೇಹಿತನನ್ನು ಕೊಲೆಗೈಯಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಸೋಮವಾರ ಸಂಜೆ ಕಾರು ವಿಹಾರ ವೀಕ್ಷಣೆಯ ನೆಪವೊಡ್ಡಿ ಬಾಲಕನನ್ನು ಕರೆದೊಯ್ದಿದ್ದ. ಬಳಿಕ ರಸ್ತೆಯಲ್ಲಿ ಬಿದ್ದುಕೊಂಡಿದ್ದ ಗಾಜಿನ ತುಂಡನ್ನು ಹೆಕ್ಕಿಕೊಂಡು ಸ್ನೇಹಿತನ ಕತ್ತು ಸೀಳಿದ್ದಾನೆ. ಬಳಿಕ ಮೃತದೇಹವನ್ನು ಎಕ್ಸ್ಪ್ರೆಸ್ ವೇ ಬಳಿಯ ಪೊದೆಗೆ ಎಸೆದು ಪರಾರಿಯಾಗಿದ್ದಾನೆ. ಮೃತ ಬಾಲಕ ಮಸೂರಿ ನಗರದ ನಿವಾಸಿಯಾಗಿದ್ದು, ಖಾಸಗಿ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿದ್ದ. ಆತನ ತಂದೆ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕೊಲೆಗೈದಾತ 16 ವರ್ಷದ ಬಾಲಕನಾಗಿದ್ದು, ಆಸ್ತಿ ಡೀಲರ್ನ ಪುತ್ರ. ಮೃತ ಬಾಲಕನ ಪ್ರದೇಶದಲ್ಲೇ ಈತನೂ ವಾಸವಾಗಿದ್ದು, ಬೇರೆ ಶಾಲೆಯಲ್ಲಿ ಕಲಿಯುತ್ತಿದ್ದ.
ಎಸ್ಪಿ ರಾಜಾ ನೀಡಿರುವ ಮಾಹಿತಿಯಂತೆ ಬಾಲಕನ ಮೃತದೇಹ ಇರುವುದಾಗಿ ಸಂಜೆ 5 ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಪತ್ತೆ ಮಾಡಿ ಆತನ ಹೆತ್ತವರಿಗೆ ಮಾಹಿತಿ ನೀಡಲಾಯಿತು ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಮಗನ ಸ್ನೇಹಿತ ಮನೆಗೆ ಬಂದು ಆತನನ್ನು ಕರೆದೊಯ್ದಿದ್ದಾನೆ ಎಂದು ಮೃತ ಬಾಲಕನ ಮನೆಯವರು ಹೇಳಿದ ಮಾಹಿತಿಯಂತೆ ಆತನ ಸ್ನೇಹಿತನ ಮನೆಗೆ ಪೊಲೀಸರ ತಂಡವನ್ನು ಕಳುಹಿಸಲಾಗಿತ್ತು. ಆದರೆ ಅಲ್ಲಿ ಆತ ಪತ್ತೆಯಾಗಿರಲಿಲ್ಲ. ಆತನ ಹೆತ್ತವರಿಗೆ ಘಟನೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಬಳಿಕ ಏಳು ಗಂಟೆಗೆ ಆತ ಟೀ ಅಂಗಡಿಯೊಂದರ ಬಳಿ ಪತ್ತೆಯಾಗಿದ್ದ. ಪೊಲೀಸರು ಆತನನ್ನು ಪತ್ತೆ ಮಾಡದಿದ್ದರೆ ತಾನೇ ಶರಣಾಗುವುದಕ್ಕೆ ಆತ ಯೋಜನೆ ರೂಪಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿರುವುದಾಗಿ ವರದಿಯಾಗಿದೆ.
ಹೆತ್ತವರು ಓದುವಂತೆ ಒತ್ತಾಯಿಸುತ್ತಿದ್ದು, ನನಗೆ ಓದು ಇಷ್ಟವಿರಲಿಲ್ಲ. ಕೆಲವು ಸಿನಿಮಾಗಳಿಂದ ಕೊಲೆ ಮಾಡುವುದನ್ನು ನೋಡಿ ಪ್ರೇರಣೆಗೊಂಡು ಕೃತ್ಯ ಎಸಗಿದ್ದೇನೆ ಎಂದು ವಿಚಾರಣೆ ವೇಳೆ ಆತ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.