ಮುಂಬೈ, ಆ 23 (DaijiworldNews/HR): ಬಾಲಿವುಡ್ ಚಲನಚಿತ್ರಗಳಲ್ಲಿ ಕಂಡುಬರುವ ಕಾರ್ಯಾಚರಣೆಯಂತೆಯೇ ಮುಂಬೈ ಪೊಲೀಸ್ ಸಿಬ್ಬಂದಿ ಝೊಮೇಟೋ ಡೆಲಿವರಿ ಬಾಯ್ಗಳ ಬಟ್ಟೆಗಳನ್ನು ಧರಿಸಿ ಇಬ್ಬರು ಸರಗಳ್ಳರನ್ನು ಬಂಧಿಸಿದ್ದಾರೆ.
ಮುಂಬೈ ಪೊಲೀಸ್ ವಲಯ 12 ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸೋಮನಾಥ್ ಘರ್ಗೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಜುಲೈ ಮತ್ತು ಆಗಸ್ಟ್ ಅವಧಿಯಲ್ಲಿ ಕಸ್ತೂರಬಾ ಮಾರ್ಗ ಪೊಲೀಸ್ ಠಾಣೆಯಲ್ಲಿ 3 ಹಾಗೂ ಬಂಗೂರ್ ನಗರ ಠಾಣೆಯಲ್ಲಿ 1 ಸರ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಇನ್ನು ಓಂ ತೋಟವರ್ ಮತ್ತು ರಾಹುಲ್ ವಾಲುಸ್ಕರ್ ತಂಡ ಅವರ ಪತ್ತೆಗಾಗಿ ಕಾರ್ಯಚರಣೆಗೆ ಮುಂದಾಗಿ 300 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ತನಿಖೆಯ ಸಮಯದಲ್ಲಿ, ಅಪರಾಧಕ್ಕೆ ಬಳಸಲಾದ ಬೈಕನ್ನು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿರುವುದು ಪೊಲೀಸರಿಗೆ ಕಂಡುಬಂದಿದೆ.
ನಂತರ ಕಸ್ತೂರಬಾ ಪೊಲೀಸ್ನ ಇಡೀ ಘಟಕವು ಝೊಮೇಟೋ ಡೆಲಿವರಿ ಬಾಯ್ಗಳ ಬಟ್ಟೆಗಳನ್ನು ಧರಿಸಿ ವಿಠಲವಾಡಿ ಮತ್ತು ಅಂಬಿವಿಲಿ ಸುತ್ತಮುತ್ತ ಸುಮಾರು 3 ದಿನಗಳ ಕಾಲ ಕಾದಿದ್ದು, ಆರೋಪಿಗಳಲ್ಲಿ ಒಬ್ಬರು ತಮ್ಮ ಬೈಕ್ ತೆಗೆದುಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ಬಂದಾಗ, ಪೊಲೀಸರು ಬೈಕ್ನ ಪ್ಲಗ್ ಅನ್ನು ತೆಗೆದಿದ್ದರಿಂದ ಪರಾರಿಯಾಗಲು ಸಾಧ್ಯವಾಗಲಿಲ್ಲ. ನಂತರ ಇತರ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಫಿರೋಜ್ ನಾಸಿರ್ ಶೇಖ್ ಮತ್ತು ಜಾಫರ್ ಯೂಸುಫ್ ಜಾಫ್ರಿ ಎಂದು ಗುರುತಿಸಲಾಗಿದ್ದು, ಈ ಇಬ್ಬರ ವಿರುದ್ದ 20 ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ದಾಖಲಾಗಿದೆ.