ಚೆನ್ನೈ, ಆ 23 (DaijiworldNews/DB): ತಲೈವಿ ಚಿತ್ರದಲ್ಲಿನ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ತಮ್ಮ ಹೆಸರನ್ನು ನಾಮ ನಿರ್ದೇಶನ ಮಾಡಿರುವ ಫಿಲ್ಮ್ಫೇರ್ ನಿಯತಕಾಲಿಕೆ ವಿರುದ್ಧ ಮೊಕದ್ದಮೆ ಹೂಡಲು ಬಾಲಿವುಡ್ ನಟಿ ಕಂಗನಾ ರನಾವತ್ ನಿರ್ಧರಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಕಂಗನಾ, ಫಿಲ್ಮ್ಫೇರ್ ಪ್ರಶಸ್ತಿಗಳು ಅನೈತಿಕ, ಭ್ರಷ್ಟ ಮತ್ತು ಅನ್ಯಾಯದಿಂದ ಕೂಡಿದೆ. ಈ ಕಾರಣದಿಂದಾಗಿ 2014 ರಿಂದಲೇ ಈ ಪ್ರಶಸ್ತಿಗಳನ್ನು ನಾನು ಸ್ವೀಕರಿಸುತ್ತಿಲ್ಲ. ಆದರೆ ಇದು ಗೊತ್ತಿದ್ದೂ, ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು, ಭಾಗವಹಿಸಲು ಕರೆ ಮಾಡುತ್ತಿರುವುದು ನನಗೆ ಅಚ್ಚರಿ ತಂದಿದೆ ಎಂದಿದ್ದಾರೆ.
ಈ ಬಗ್ಗೆ ಇನ್ಸ್ಚಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಫಿಲ್ಮ್ಫೇರ್ ಪ್ರಶಸ್ತಿಗಳು ಅನೈತಿಕ, ಭ್ರಷ್ಟ ಮತ್ತು ಅನ್ಯಾಯ ಎಂದು ಅವರು ಗುಡುಗಿದ್ದಾರೆ. ತಾವು ನಿಷೇಧಿಸಿದ ನಂತರವೂ ಪ್ರಶಸ್ತಿಗೆ ತಮ್ಮ ಚಿತ್ರವನ್ನು ನಾಮಾಂಕಿತ ಮಾಡಿರುವುದು ಅಚ್ಚರಿಯನ್ನುಂಟುಮಾಡಿದೆ ಎಂದು ಸಹ ಕಂಗನಾ ಬರೆದುಕೊಂಡಿದ್ದಾರೆ.
ಇಂತಹ ಭ್ರಷ್ಟ ಕಾರ್ಯಕ್ರಮಗಳು, ಪ್ರಶಸ್ತಿ ಪಡೆಯುವಿಕೆಯನ್ನು ನಾನೆಂದೂ ಪ್ರೋತ್ಸಾಹಿಸುವುದಿಲ್ಲ. ಅಲ್ಲದೆ, ಇದು ನನ್ನ ಕೆಲಸದ ನೀತಿ, ಘನತೆ ಮತ್ತು ಮೌಲ್ಯಕ್ಕೆ ವಿರುದ್ದವಾಗಿದೆ. ಹೀಗಾಗಿಯೇ ಫಿಲ್ಮ್ಫೇರ್ ವಿರುದ್ದ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ತಲೈವಿಯಲ್ಲಿ ಕಿಯಾರಾ ಅಡ್ವಾಣಿ, ಕೃತಿ ಸನೋನ್, ಪರಿಣಿತಿ ಚೋಪ್ರಾ, ತಾಪ್ಸಿ ಪನ್ನು ಮತ್ತು ವಿದ್ಯಾ ಬಾಲನ್ ಅವರೊಂದಿಗೆ ಕಂಗನಾ ನಟಿಸಿದ್ದರು. ಇನ್ನು ಅವರ ಸಹನಟ ರಾಜ್ ಅರ್ಜುನ್ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ, ನೀತಾ ಲುಲ್ಲಾ ಮತ್ತು ದೀಪಾಲಿ ನೂರ್ ಅತ್ಯುತ್ತಮ ವಸ್ತ್ರ ವಿನ್ಯಾಸ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.
ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಬ್ಯುಸಿಯಾಗಿದ್ದು, ಅದರಲ್ಲಿ ಅವರು ಇಂದಿರಾ ಗಾಂಧಿ ಪಾತ್ರ ಮಾಡುತ್ತಿದ್ದಾರೆ.