ಮಡಿಕೇರಿ, ಆ 22 (DaijiworldNews/SM): ಕೊಡಗಿನಲ್ಲಿ ಇತ್ತೀಚೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ. ಮೊಟ್ಟೆ ಎಸೆದ ಕಿಡಿಗೇಡಿಗಳ ಪತ್ತೆಗೆ ವಿಶೇಷ ತಂಡವನ್ನು ನೇಮಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಲಾಗಿದೆ.
ವಿಶೇಷ ಪೊಲೀಸ್ ತಂಡವು ಗುಡ್ಡೆಹೊಸೂರಿಗೆ ಆಗಮಿಸಿದ್ದು, ಆಗಸ್ಟ್ 18 ರಂದು ವರದಿಯಾದ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ದೃಶ್ಯಾವಳಿ, ಸಿಸಿಟಿವಿ ದೃಶ್ಯಗಳು, ಪತ್ರಿಕೆಗಳ ವರದಿಗಳು ಸೇರಿದಂತೆ ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.
ಚಾಮರಾಜನಗರ ಜಿಲ್ಲಾಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರನ್ನು ಉನ್ನತ ಮಟ್ಟದ ತನಿಖಾ ಅಧಿಕಾರಿಯಾಗಿ ರಾಜ್ಯ ಸರ್ಕಾರ ನೇಮಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.
ಏತನ್ಮಧ್ಯೆ, ಸಿದ್ದರಾಮಯ್ಯ ಅವರ ವಾಹನದ ಮೇಲೆ ಮೊಟ್ಟೆ ಎಸೆದ ಆರೋಪಿ ಸಂಪತ್ ವಿರುದ್ಧ ರಾಜಕೀಯ ಪಕ್ಷಗಳಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳು ಮುಂದುವರೆದಿವೆ. ಸಂಪತ್ ತಮ್ಮ ಬೆಂಬಲಿಗ ಎಂಬ ಆರೋಪವನ್ನು ಹಿರಿಯ ಕಾಂಗ್ರೆಸ್ ನಾಯಕ ಬಿಎ ಜೀವಿಜಯ ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಅಲ್ಲದೆ ಗುತ್ತಿಗೆದಾರರಾಗಿರುವ ಸಂಪತ್ ಅವರು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರಿಂದ ಗುತ್ತಿಗೆ ಪಡೆಯಲು ಸಹಾಯ ಪಡೆದಿದ್ದಾರೆ ಎಂದು ಜೀವಿಜಯ ಆರೋಪಿಸಿದ್ದಾರೆ.