ನಿಜಾಮಾಬಾದ್, ಆ 22 (DaijiworldNews/MS): ಹೋಟೆಲೊಂದರಲ್ಲಿ , ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಅಮಾನುಷ ಘಟನೆ ನಿಜಾಮಾಬಾದ್ನಲ್ಲಿ ನಡೆದಿದೆ.
ಮೃತರನ್ನು ಆದಿಲಾಬಾದ್ ಜಿಲ್ಲೆಯ ಸೂರ್ಯಪ್ರಕಾಶ್ (37), ಪತ್ನಿ ಅಕ್ಷಯ (36), ಪುತ್ರಿ ಪ್ರತ್ಯೂಷಾ (13) ಮತ್ತು ಅದ್ವೈತ್ (10) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಹೈದರಾಬಾದ್ ಕೊತಕೊಂಡದ ಸೂರ್ಯಪ್ರಕಾಶ್ ಕುಟುಂಬದೊಂದಿಗೆ ನಿಜಾಮಾಬಾದ್ನ ಹೋಟೆಲ್ನಲ್ಲಿ ತಂಗಿದ್ದರು. ಭಾನುವಾರ ಮಧ್ಯಾಹ್ನದವರೆಗೂ ಕುಟುಂಬ ಸದಸ್ಯರು ಯಾರೂ ಕೊಠಡಿಯಿಂದ ಹೊರಗೆ ಬಾರದ ಕಾರಣ ಹೋಟೆಲ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಬಲವಂತವಾಗಿ ಬಾಗಿಲು ತೆರೆದ ನಂತರ ಪೊಲೀಸರು ನಾಲ್ಕು ಶವಗಳನ್ನು ಪತ್ತೆ ಮಾಡಿದರು.
ಕೊಠಡಿಯಲ್ಲಿ ಕೆಲವು ಕೇಕ್ ಪೀಸ್ಗಳಿದ್ದು, ಸೂರ್ಯಪ್ರಕಾಶ್ ಕೇಕ್ನಲ್ಲಿ ವಿಷ ಬೆರೆಸಿ ಕುಟುಂಬಕ್ಕೆ ತಿನ್ನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸೂರ್ಯಪ್ರಕಾಶ್ ಅಕ್ಷಯ ಅವರನ್ನು ವಿವಾಹವಾಗಿದ್ದರು. ಇವರು ಆದಿಲಾಬಾದ್ನಲ್ಲಿ ಪೆಟ್ರೋಲ್ ಬಂಕ್ ನಿರ್ವಹಿಸುತ್ತಿದ್ದರು. ಬಳಿಕ ತನ್ನ ಆಸ್ತಿಯನ್ನೆಲ್ಲಾ ಮಾರಿ ಹೈದರಾಬಾದ್ಗೆ ತೆರಳಿದ್ದರು. ರಾಯದುರ್ಗದಲ್ಲಿ ಫ್ಲಾಟ್ ಖರೀದಿಸಿದ್ದರು.
ಅವರ ಹೆಚ್ಚಿನ ಸಂಬಂಧಿಕರು ಇಲ್ಲಿ ವಾಸಿಸುವುದರಿಂದ ಅವರು ಆಗಾಗ್ಗೆ ನಿಜಾಮಾಬಾದ್ಗೆ ಭೇಟಿ ನೀಡುತ್ತಿದ್ದರು. ಅವರು ಆಗಸ್ಟ್ 4 ರಂದು ಕುಟುಂಬ ಸಮೇತ ನಿಜಾಮಾಬಾದ್ ಗೆ ಬಂದು ಸ್ಥಳೀಯ ಹೋಟೆಲ್ ನಲ್ಲಿ ತಂಗಿದ್ದರು. ಮಾತ್ರವಲ್ಲದೇ ತಮ್ಮ ಸಂಬಂಧಿಕರನ್ನು ಭೇಟಿ ಮಾಡಿದ್ದರು.
ಸೂರ್ಯಪ್ರಕಾಶ್ ಅವರು ತಮ್ಮ ವ್ಯಾಪಾರ ಪಾಲುದಾರರೊಂದಿಗೆ ವಿವಾದಗಳನ್ನು ಹೊಂದಿದ್ದು, ಹೆಚ್ಚು ಹಣ ನೀಡುವಂತೆ ಅವರು ಬೆದರಿಕೆ ಹಾಕುತ್ತಿದ್ದು ಇದರಿಂದ ಈ ನಿರ್ಧಾರ ಕೈಗೊಂಡಿರಬಹುದು ಎಂದು ನಿಜಾಮಾಬಾದ್ ಎಸಿಪಿ ವೆಂಕಟೇಶ್ವರ್ ತಿಳಿಸಿದ್ದಾರೆ.