ನವದೆಹಲಿ, ಆ 22 (DaijiworldNews/MS): ಯುಪಿಐ ಆಧರಿತ ಪೇಮೆಂಟ್ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಯುಪಿಐ ಪಾವತಿ ಸೇವೆಗಳ ಮೇಲೆ ಶುಲ್ಕ ವಿಧಿಸುವ ಕುರಿತು ಗಂಭೀರ ಚಿಂತನೆಯಲ್ಲಿದೆ ಎಂಬ ವದಾಂತಿಗಳ ನಡುವೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಯುಪಿಐ ಪಾವತಿ ಸೇವೆಗಳ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ " UPI ಸಾರ್ವಜನಿಕರಿಗೆ ಅಪಾರ ಅನುಕೂಲತೆ ಮತ್ತು ಆರ್ಥಿಕತೆಗೆ ಉತ್ಪಾದಕತೆಯ ಲಾಭಗಳೊಂದಿಗೆ ಡಿಜಿಟಲ್ ಸಾರ್ವಜನಿಕ ಸರಕಾಗಿದೆ. ಡಿಜಿಟಲ್ ಸೇವೆ ಒದಗಿಸುವ ಸೇವಾದಾತರಿಗೆ ತುಸು ಖರ್ಚು ಬರುವುದು ನಿಜ. ಆದರೆ ಈ ಖರ್ಚನ್ನು ಭರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ. ಒಟ್ಟಾರೆಯಾಗಿ ಡಿಜಿಟಲ್ ವಹಿವಾಟು ಹೆಚ್ಚಾಗುವುದು ಸಮಾಜ ಹಾಗೂ ಉತ್ಪಾದಕತೆಗೆ ಹಲವು ರೀತಿಯಲ್ಲಿ ಅನುಕೂಲವಾಗಿದೆ. ಡಿಜಿಟಲ್ ಪಾವತಿಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರವು ಕಳೆದ ವರ್ಷ ಹಲವು ನೆರವು ನೀಡಿತ್ತು. ಆ ನೆರವನ್ನು ಈ ವರ್ಷವೂ ಮುಂದುವರಿಸಲಿದೆ’ ಎಂದು ಹೇಳಿದೆ.
ಫೋನ್ ಪೆ, ಗೂಗಲ್ ಪೆ, ಭೀಮ್ ಸೇರಿದಂತೆ ಆ್ಯಪ್ಗಳ ಮೂಲಕ ನಡೆಯುವ ಯುಪಿಐ ವಹಿವಾಟುಗಳ ಪ್ರಮಾಣದ ದೃಷ್ಟಿಯಿಂದ ದೇಶದ ಏಕೈಕ ಅತಿದೊಡ್ಡ ಚಿಲ್ಲರೆ ಪಾವತಿ ವ್ಯವಸ್ಥೆಯಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂಕಿಅಂಶಗಳ ಪ್ರಕಾರ, 338 ಬ್ಯಾಂಕುಗಳು ಯುಪಿಐನಲ್ಲಿ ಸಕ್ರಿಯವಾಗಿವೆ ಮತ್ತು ಒಟ್ಟು ವಹಿವಾಟುಗಳ ಪ್ರಮಾಣವು 638.8 ಕೋಟಿಯಾಗಿದೆ. 10.62 ಕ್ಷ ಕೋಟಿ ರೂ. ಪ್ರತಿದಿನ 21 ಕೋಟಿಗೂ ಹೆಚ್ಚು ವಹಿವಾಟುಗಳು ನಡೆಯುತ್ತಿವೆ ಎನ್ನಲಾಗಿದೆ.