ಬೆಂಗಳೂರು, ಆ 22 (DaijiworldNews/MS): ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದ್ದ, ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ನಿಧನರಾಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು.
ಬೆಳಗ್ಗೆ ಜಿಮ್ಗೆ ತೆರಳಿ ವರ್ಕೌಟ್ ಮಾಡುವಾಗ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ನಾಗರಭಾವಿಯ ಯುನಿಟಿ ಲೈಫ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮದ್ಯೆ ಗುರುಲಿಂಗಸ್ವಾಮಿ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದವರಾಗಿರುವ ಗುರುಲಿಂಗಸ್ವಾಮಿ ಹೊಳಿಮಠ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ, ಕನ್ನಡದ ರಾಜ್ಯ ಮಟ್ಟದ ದಿನಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿಯೂ 1998 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾಗಿದ್ದ ಅವರು, ಈ ಹಿಂದೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದರು.
ಅ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬೆನ್ನಲ್ಲೇ ಗುರುಲಿಂಗಸ್ವಾಮಿ ಹೊಳಿಮಠ ಅವರನ್ನು ತಮ್ಮ ಮಾಧ್ಯಮ ಸಂಯೋಜಕರನ್ನಾಗಿ ನೇಮಕ ಮಾಡಿಕೊಂಡಿದ್ದರು.
ಅವರ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಸಂತಾಪ ಸೂಚಿಸಿದ್ದಾರೆ .ಪತ್ನಿ ದೀಪಾ ಹೊಳಿಮಠ್ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.