ಚಿಕ್ಕಬಳ್ಳಾಪುರ, ಆ 22 (DaijiworldNews/MS): ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎನ್ನುವ ಚರ್ಚೆ ನಡುವೆಯೇ, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು..? ಒಂದು ದಿನದ ಮುಂಚೆ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪಾಗಲ್ವೇ…?, ದೇವರು ಇಂಥದ್ದೇ ಆಹಾರ ಸೇವಿಸಿ ಬರಬೇಕು ಎಂದು ಹೇಳುತ್ತಾರೆಯೇ ? ನನ್ನ ಊಟದ ಬಗ್ಗೆ ಪ್ರಶ್ನಿಸಲು ನೀವ್ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಕೊಡಗಿನ ಭೇಟಿ ವೇಳೆ ಮಡಿಕೇರಿಯ ಸರ್ಕ್ಯೂಟ್ ಹೌಸ್ನಲ್ಲಿ ಮಧ್ಯಾಹ್ನ ಊಟ ಮಾಡಿದ್ದರು. ಈ ವೇಳೆ ಸಿದ್ದರಾಮಯ್ಯರಿಗೆ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯರವರ ಮನೆಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಿದ್ದರಾಮಯ್ಯಗಾಗಿ ನಾಟಿಕೋಳಿ ಸಾರು, ರಾಗಿ ಮುದ್ದೆ, ಕಳಲೆ (ಕಣಿಲೆ), ಅನ್ನ ತರಕಾರಿ ಸಾರು ವ್ಯವಸ್ಥೆ ಮಾಡಲಾಗಿತ್ತು.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಮಾಂಸಹಾರಿಗಳು ಮಾಂಸ ತಿಂತಾರೆ ಸಸ್ಯಾಹಾರಿಗಳು ಸಸ್ಯಾಹಾರ ತಿಂತಾರೆ .. ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಬೇಡ ಅಂತ ಕೇಳೋಕೆ ನೀವ್ಯಾರು? ಮಧ್ಯಾಹ್ನ ತಿಂದು ಸಂಜೆ ದೇವಾಲಯಕ್ಕೆ ಹೋದ್ರೆ ತಪ್ಪೇನು? ನನ್ನ ಊಟದ ಬಗ್ಗೆ ಪ್ರಶ್ನಿಸಲು ನೀವ್ಯಾರು? ಎಂದು ಬಿಜ್ಪಿ ನಾಯಕರ ವಿರುದ್ದ ಕಿಡಿಕಾರಿದ್ದಾರೆ.
ಬಿಜೆಪಿಯವರಿಗೆ ನಮ್ಮ ಏಳಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಯವರ ತಪ್ಪುಗಳನ್ನು ಮುಚ್ಚಿಡಲು ಈ ರೀತಿಯ ಅಪಪ್ರಚಾರಕ್ಕೆ ಮುಂದಾಗುತ್ತಿದ್ದಾರೆ. ಬಿಜೆಪಿ ಮಾಡುತ್ತಿರುವುದು ಜನೋತ್ಸವ ಅಲ್ಲ. ಅದು ಭ್ರಷ್ಟೋತ್ಸವ ಎಂದು ಲೇವಡಿ ಮಾಡಿದ್ದಾರೆ.