ಮುಂಬೈ, ಆ 22 (DaijiworldNews/MS): ಬಾಲಿವುಡ್ ನಟ ಹೃತಿಕ್ ರೋಶನ್ ಅಭಿನಯದ ಜೊಮ್ಯಾಟೊ ಕಂಪನಿಯ ಜಾಹೀರಾತು ವಿವಾದ ಸೃಷ್ಟಿಸಿದ ಹಿನ್ನಲೆಯಲ್ಲಿ ಜೊಮ್ಯಾಟೊ ಸಂಸ್ಥೆ ಕ್ಷಮೆಯಾಚಿಸಿದೆ. ಜತೆಗೆಯಾರ ಭಾವನೆಗೂ ಧಕ್ಕೆ ತರುವ ಉದ್ದೇಶವಿಲ್ಲ ಎಂದು ಹೇಳಿದೆ.
ಜಾಹೀರಾತಿನಲ್ಲಿ ಆಹಾರ ತಂದುಕೊಡುವ ಡೆಲಿವರಿ ಬಾಯ್ ಯನ್ನು ಉದ್ದೇಶಿಸಿ , "ಉಜ್ಜಯಿನಿಯಲ್ಲಿ ಥಾಲಿ ಸವಿಯಬೇಕೆನಿಸಿತು. ಹಾಗಾಗಿ ಮಹಾಕಾಲ ನಿಂದಲೇ ಆರ್ಡರ್ ಮಾಡಿದೆ," ಎಂದು ಡೈಲಾಗ್ ಹೊಡೆದಿದ್ದಾರೆ. ಉಜ್ಜಯಿನಿಯ ಮಹಾಕಾಲ ಎಂದರೆ ಅಲ್ಲಿನ ಜ್ಯೋತಿರ್ಲಿಂಗ ರೂಪಿ ಶಿವವಾಗಿದ್ದು, ಆಹಾರ ಡೆಲಿವರಿ ಆಪ್ ಜೊಮ್ಯಾಟೊ ತನ್ನ ಜಾಹೀರಾತಿನಲ್ಲಿ ದೇವರಿಗೆ ಅವಮಾನ ಮಾಡಿದೆ ಎಂದು ಈ ಜಾಹಿರಾತು ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಹಿಂದೂ ಪರ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದವು.
ಕೂಡಲೇ ಎಚ್ಚೆತ್ತುಕೊಂಡ ಜೊಮ್ಯಾಟೋ ಕಂಪನಿಯು ಸ್ಪಷ್ಟನೆ ನೀಡಿ, ''ಸಾರ್ವಜನಿಕರ ಮನಸ್ಸಿಗೆ ನೋವಾಗಿದ್ದಲ್ಲಿ ಕ್ಷಮೆಯಾಚಿಸುತ್ತೇವೆ," ಎಂದಿದೆ. ಜತೆಗೆ ವಿವಾದಿತ ಜಾಹೀರಾತನ್ನು ಕೂಡ ಕಂಪನಿ ಹಿಂಪಡೆದಿದೆ. ಮಾತ್ರವಲ್ಲದೆ ನಮ್ಮ ಜಾಹೀರಾತಿನಲ್ಲಿ ಹೃತಿಕ್ ರೋಶನ್ ಹೇಳುವಂತೆ ಮಹಾಕಾಲ ಎಂದರೆ ಶಿವನಲ್ಲ. ಬದಲಿಗೆ ಉಜ್ಜಯಿನಿಯ ಜನಪ್ರಿಯ ಮಹಾಕಾಲ್ ರೆಸ್ಟೋರೆಂಟ್. ಜನರು ತಪ್ಪಾಗಿ ಭಾವಿಸಬಾರದು,'' ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ವಿವಾದಿತ ಜಾಹೀರಾತಿನ ಬಗ್ಗೆ ಸ್ಪಷ್ಟನೆ ನೀಡಿದೆ.