ಬೆಂಗಳೂರು, ಆ 22 (DaijiworldNews/MS): ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರವಧಿ ಪೂರ್ಣಗೊಂಡಿದ್ದು, ಹೀಗಾಗಿ ರಾಜ್ಯ ಬಿಜೆಪಿಗೆ ನೂತನ ಸಾರಥಿ ಯಾರಾಗಲಿದ್ದಾರೆ ಅನ್ನೋ ಕುತೂಹಲ ಸಹಜವಾಗಿಯೇ ಗರಿಗೆದರಿದೆ. ಇನ್ನೊಂದೆಡೆ ಬಿಜೆಪಿಯ ಹೈಕಮಾಂಡ್ ಯಾವ ಫೈಯರ್ ಬ್ರಾಂಡ್ ಗೆ ಮಣೆಯನ್ನು ಹಾಕಲಿದೆ ಎಂಬ ಚರ್ಚೆ ಜೋರಾಗುತ್ತಿದೆ.
ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರವಧಿ ಕಳೆದ ಶನಿವಾರ ಅಧಿಕೃತವಾಗಿ ಪೂರ್ಣಗೊಂಡಿದೆ. ಇನ್ನೊಂದೆಡೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯೂ ಸಮೀಪದಲ್ಲಿದೆ. ಹೀಗಾಗಿ ಸಮರ್ಥ ರಾಜ್ಯಾಧ್ಯಕ್ಷರ ಆಯ್ಕೆಯ ಅನಿವಾರ್ಯತೆ ಬಿಜೆಪಿ ಹೈಕಮಾಂಡಿಗಿದೆ. ಆದರೆ ಅವಧಿ ಮುಗಿದ ಕೂಡಲೇ ಬದಲಾಯಿಸಬೇಕು ಎಂಬ ನಿಯಮವೂ ಇಲ್ಲ, ಹೀಗಾಗಿ ಕಟೀಲ್ ಅವರನ್ನು ಮುಂದಿನ ಚುನಾವಣೆ ಮುಗಿಯುವವರೆಗೆ ಮುಂದುವರೆಸುತ್ತಾರೆಯೇ ಅಥವಾ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆಯೇ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.
ಇವೆಲ್ಲದರ ನಡುವೆ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ, ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಟಿ ರವಿ , ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಸಚಿವ ಸುನೀಲ್ ಕುಮಾರ್ ಅವರ ಹೆಸರು ರೇಸ್ ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ. ಜೊತೆಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಚಿವ ಶ್ರೀರಾಮುಲು ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಇವರೆಲ್ಲರನ್ನೂ ಬಿಟ್ಟು ಹೈಕಮಾಂಡ್ ನ ಅಚ್ಚರಿಯ ಅಯ್ಕೆಯನ್ನು ಕೂಡಾ ತಳ್ಳಿಹಾಕುವಂತಿಲ್ಲ.
ಮುಂದಿನ ವಿಧಾನಸಭೆ ಚುನಾವಣೆ, ಜಾತಿವಾರು ಲೆಕ್ಕಚಾರ, ಕೋಮು -ಹತ್ಯೆ ಇತ್ಯಾದಿ ವಿಚಾರವಾಗಿ ಕರಾವಳಿಯ ಭಾಗದಲ್ಲಿ ಪಕ್ಷದ ಕಾರ್ಯಕರ್ತರೇ ತಿರುಗಿಬಿದ್ದಿದ್ದು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರ ಆಯ್ಕೆಯಲ್ಲೂ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆಯೇ ಅನ್ನೋದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.