ಮೈಸೂರು, ಆ 21 (DaijiworldNews/SM): ಕೊಡಗಿಗೆ ತೆರಳಿದ್ದಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಕ್ರಮ ಸರಿಯಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಖಂಡಿಸಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಹೇಳಿಕೆ ಕೊಟ್ಟರು ಎಂದು ಮೊಟ್ಟೆ ಎಸೆಯುವುದು ಸರಿಯಲ್ಲ, ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಇದೆ. ಯಾರು ಯಾವ ಅಭಿಪ್ರಾಯವನ್ನಾದರೂ ವ್ಯಕ್ತಪಡಿಸಬಹುದು'' ಎಂದು ಹೇಳಿದರು.
''ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಏನು ಬೇಕಾದರೂ ಹೇಳಲಿ, ಸಾವರ್ಕರ್, ಟಿಪ್ಪು, ಹೆಡಗೆವಾರ್, ಗೋಳ್ವಾಲ್ಕರ್ ಎಲ್ಲರ ಬಗ್ಗೆಯೂ ಸಾರ್ವಜನಿಕ ಚರ್ಚೆಯಾಗಲಿ. ಸತ್ಯ ಯಾವುದು ಎಂದು ಹೊರ ಬರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಅವರವರ ಅಭಿಪ್ರಯಾವನ್ನು ವ್ಯಕ್ತಪಡಿಸಬಹುದು'' ಎಂದು ಹೇಳಿದರು.