ನವದೆಹಲಿ, ಆ 21 (DaijiworldNews/SM): ಕಳೆದ ಮೂರು ದಿನಗಳಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಒಡಿಶಾದಲ್ಲಿ ತೀವ್ರ ಮುಂಗಾರು ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಶನಿವಾರ ಮಳೆ ಸಂಬಂಧಿತ ಘಟನೆಗಳಲ್ಲಿ 22 ಜನರು ಸಾವನ್ನಪ್ಪಿದ್ದು 12 ಜನರು ಗಾಯಗೊಂಡಿದ್ದಾರೆ. ಮಂಡಿ, ಕಂಗ್ರಾ ಮತ್ತು ಚಂಬಾ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಾನಿಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಮಂಡಿಯ ಮಂಡಿ-ಕಟೋಲಾ-ಪ್ರಶಾರ್ ರಸ್ತೆಯ ಬಾಘಿ ನುಲ್ಲಾದಲ್ಲಿ ನಾಪತ್ತೆಯಾದ ಐವರು ಇಂದು ಸಹ ಪತ್ತೆಯಾಗಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ಪಿಟಿಐಗೆ ತಿಳಿಸಿದ್ದಾರೆ.
ನಿನ್ನೆ ಈ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದ ನಂತರ ಹಲವಾರು ಕುಟುಂಬಗಳು ಬಾಘಿ ಮತ್ತು ಓಲ್ಡ್ ಕಟೋಲಾ ನಡುವೆ ಇರುವ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿವೆ. ಶೋಘಿ ಮತ್ತು ತಾರಾ ದೇವಿ ನಡುವಿನ ಸೋನು ಬಾಂಗ್ಲಾದಲ್ಲಿ ಭೂಕುಸಿತದ ನಂತರ ಶನಿವಾರ ಸಂಜೆ ಶಿಮ್ಲಾ-ಚಂಡೀಗಢ ಹೆದ್ದಾರಿಯನ್ನು ನಿರ್ಬಂಧಿಸಲಾಗಿದ್ದು ಇಂದು ವಾಹನ ಸಂಚಾರಕ್ಕೆ ತೆರವುಗೊಳಿಸಲಾಗಿದೆ ಎಂದು ಮೋಖ್ತಾ ಹೇಳಿದರು.