ಹುಬ್ಬಳ್ಳಿ, ಆ 21 (DaijiworldNews/SM): ರಾಜ್ಯದಲ್ಲಿ ಸದ್ಯ ಸಾವರ್ಕರ್ ವಿಚಾರವನ್ನು ಮುಂದಿಟ್ಟುಕೊಂಡು ಅನಗತ್ಯ ರಾಜಕೀಯ ನಡೆಸಲಾಗುತ್ತಿದೆ. ಅಮಾಯಕರನ್ನು ಬಲಿಪಡೆಯುವ ಹುನ್ನಾರ ನಡೆಯುತ್ತಿದೆ. ಈ ನಡುವೆಯೇ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಂದು ರಾಜಕೀಯ ಪಕ್ಷದ ಜವಾಬ್ದಾರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
‘ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಬಗ್ಗೆಯೂ ಪರ-ವಿರೋಧ ನಂಬಿಕೆ ಮತ್ತು ವಾದಗಳಿವೆ. ಇವು ಐತಿಹಾಸಿಕ ವಿಚಾರಗಳಾಗಿದ್ದು, ಪರ-ವಿರೋಧ ವಾದಗಳಿರುತ್ತವೆ. ಯಾವುದೇ ವಿಚಾರದ ಬಗ್ಗೆ ವೈಚಾರಿಕತೆ ಇದ್ದರೆ, ವೈಚಾರಿಕ ಚಿಂತನೆಯಿಂದಲೇ ಪ್ರತಿಪಾದಿಸಬೇಕು. ವೈಚಾರಿಕತೆಯಿಂದಲೇ ವಿರೋಧಿಸಬೇಕು. ಇಂತಹ ವಿಷಯಗಳನ್ನು ಬೀದಿಗೆಳೆದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸವನ್ನು ಯಾರೂ ಮಾಡಬಾರದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯರ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಾವುದೇ ಘಟನೆ ನಡೆದಾಗ ಕಾನೂನುಬದ್ಧ ತನಿಖೆ ನಡೆಸಲಾಗುತ್ತದೆ. ವಿಪಕ್ಷ ನಾಯಕರಿಗೆ ರಕ್ಷಣೆ ನೀಡಲು ಈಗಾಗಲೇ ಸೂಚಿಸಲಾಗಿದೆ. ಈ ಪ್ರಕರಣಕ್ಕೆ ರಾಜಕೀಯ ಲೇಪನ ಮಾಡುವುದು ಆಯಾ ರಾಜಕೀಯ ಪಕ್ಷಕ್ಕೆ ಬಿಟ್ಟಿದ್ದು. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯವಾಗಿದೆ' ಎಂದು ಅವರು ನುಡಿದರು.