ಜಮ್ಮು, ಆ 21 (DaijiworldNews/DB): ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಪಾಕಿಸ್ತಾನಿ ಒಳನುಸುಳುಕೋರನನ್ನು ಸೇನಾ ಪಡೆಗಳು ಭಾನುವಾರ ಬಂಧಿಸಿದ್ದಾರೆ.
ನೌಶೇರಾ ಸೆಕ್ಟರ್ನ ಜಂಗರ್ ಪ್ರದೇಶದಲ್ಲಿ ಗಡಿಯಾಚೆಯಿಂದ ಈತ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಭಾರತೀಯ ಸೇನೆ ಗಮನಿಸಿದೆ. ಕೂಡಲೇ ಅವನತ್ತ ಗುಂಡಿನ ದಾಳಿ ನಡೆಸಲಾಗಿದೆ. ಈ ವೇಳೆ ನುಸುಳುಕೋರ ಗಾಯಗೊಂಡಿದ್ದು, ಆತನನ್ನು ಕೂಡಲೇ ಬಂಧಿಸಲಾಗಿದೆ. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಬಂಧಿತನಿಂದ ಯಾವುದೇ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.