ನವದೆಹಲಿ, ಆ 21 (DaijiworldNews/DB): ರೈತ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ದೆಹಲಿ ಗಡಿಯಲ್ಲಿ ದೆಹಲಿಯ ಮಧು ವಿಹಾರ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಆರೋಪಿಸಿ ದೆಹಲಿಯ ಜಂತರ್-ಮಂತರ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನಾ ಪೊಲೀಸರು ತಮ್ಮನ್ನು ತಡೆದಿರುವ ಕುರಿತು ಅವರು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ಬಂಧನ ಹೊಸ ಕ್ರಾಂತಿಯ ಸೃಷ್ಟಿಗೆ ವೇದಿಕೆಯಾಗಲಿದೆ. ಕೊನೆಯುಸಿರಿರುವವರೆಗೂ ಹೋರಾಟ ನಡೆಯಲಿದೆ ಎಂದು ಬರೆದುಕೊಂಡಿದ್ದಾರೆ.
ಟಿಕಾಯತ್ ವಶಪಡಿಸಿಕೊಂಡ ಕುರಿತು ಸುದ್ದಿಗಾರರಿಗೆ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಟಿಕಾಯತ್ ಜಂತರ್ ಮಂತರ್ಗೆ ತೆರಳುತ್ತಿದ್ದಾಗ ಘಾಜಿಪುರದಲ್ಲಿ ಅವರನ್ನು ತಡೆದು ವಶಕ್ಕೆ ತೆಗೆದುಕೊಳ್ಳಲಾಯಿತು. ಬಳಿಕ ಮಧು ವಿಹಾರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರ ವಿಚಾರಣೆ ನಡೆಸಲಾಗಿದ್ದು, ಹಿಂತಿರುಗುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.