ಹುಬ್ಬಳ್ಳಿ, ಆ 21 (DaijiworldNews/DB): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ವಿಚಾರಕ್ಕೆ ಸಂಬಂಧಿಸಿದಂತೆ ಯಾರೇನೇ ಒಪ್ಪಿಕೊಂಡರೂ ನಾವು ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಯಾರೇನೇ ಒಪ್ಪಿಕೊಳ್ಳಲಿ, ಬಿಡಲಿ ನಾವು ತನಿಖೆ ಮಾಡುತ್ತೇವೆ. ಇಂದು ನಾನು ಮಾಡಿದ್ದು ಎಂದು ಒಬ್ಬ ಹೇಳಿದ್ದರೆ, ನಾಳೆ ಇನ್ನೊಬ್ಬ ಕ್ಲೈಮ್ ಮಾಡಿಕೊಳ್ಳುತ್ತಾನೆ. ತನಿಖೆ ನಡೆಸಿದರೆ ಮಾತ್ರ ಈ ಕುರಿತು ಸ್ಪಷ್ಟವಾಗುತ್ತದೆ. ತನಿಖಾ ವರದಿ ಬಂದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದರು.
ರಾಜ್ಯದಲ್ಲಿ ಶಾಂತಿ ಅಗತ್ಯ. ಸಾವರ್ಕರ್ರನ್ನು ಇಂಧಿರಾ ಗಾಂಧಿಯವರೇ ಮೆಚ್ಚಿದ್ದಾರೆ. ಟಿಪ್ಪು ಮತ್ತು ಸಾವರ್ಕರ್ ವಿಚಾರವಾಗಿ ವೈಚಾರಿಕ ಭಿನ್ನಾಭಿಪ್ರಾಯಗಳಿವೆ. ಈ ಕುರಿತು ರಾಜಕಾರಣ ಆಯಾ ಪಕ್ಷಕ್ಕೆ ಬಿಟ್ಟದ್ದಾಗಿದೆ. ಆದರೆ ರಾಜ್ಯದ ಶಾಂತಿಯನ್ನು ಯಾರೂ ಕೆಡಿಸಬಾರದು ಎಂದವರು ತಿಳಿಸಿದರು.
ವೈಚಾರಿಕ ಹಿನ್ನೆಲೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಹೋಗಿ ಯಾರೂ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಕಾನೂನು ಕೈಗೆತ್ತಿಕೊಳ್ಳುವ ಕೆಲಸವನ್ನು ಯಾರೂ ಮಾಡಬಾರದು. ಕಾನೂನು ಉಲ್ಲಂಘಿಸುವುದು ಸರಿಯಲ್ಲ ಎಂದರು.