ಗೋಲ್ಪಾರಾ, ಆ 21 (DaijiworldNews/DB): ಅಲ್-ಖೈದಾ ಭಾರತೀಯ ಉಪಖಂಡ ಮತ್ತು ಅನ್ಸರುಲ್ಲಾ ಬಾಂಗ್ಲಾ ತಂಡದೊಂದಿಗೆ ನಂಟು ಹೊಂದಿರುವ ಶಂಕಿತ ಭಯೋತ್ಪಾದಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಗೋಲ್ಪಾರಾ ಜಿಲ್ಲೆಯಲ್ಲಿ ಇವರಿಬ್ಬರ ಬಂಧನವಾಗಿದೆ. ಬಂಧಿತರಿಬ್ಬರೂ ಬಾರ್ಪೆಟಾ ಮತ್ತು ಮೊರಿಗಾಂವ್ ನ ಉಗ್ರ ತಂಡಗಳೊಂದಿಗೆ ನೇರ ಸಂಪರ್ಕ ಹೊಂದಿದ್ದು, ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಕೆಲವು ವಸ್ತುಗಳು ಪತ್ತೆಯಾಗಿವೆ. ಅಲ್-ಖೈದಾ, ಜಿಹಾದಿ ಅಂಶಗಳು, ಪೋಸ್ಟರ್ಗಳು ಮತ್ತು ಇತರ ದಾಖಲೆಗಳು, ಮೊಬೈಲ್ ಫೋನ್, ಸಿಮ್ ಕಾರ್ಡ್ ಮತ್ತು ಐಡಿ ಕಾರ್ಡ್ಗಳನ್ನು ಬಂಧಿತರಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿ.ವಿ. ರಾಕೇಶ್ ರೆಡ್ಡಿ ತಿಳಿಸಿರುವುದಾಗಿ ವರದಿಯಾಗಿದೆ.
ಬಾಂಗ್ಲಾದಿಂದ ಬಂದ ಜಿಹಾದಿ ಭಯೋತ್ಪಾದಕರಿಗೆ ಬೆಂಬಲ ಮತ್ತು ಆಶ್ರಯ ನೀಡಿದ ಆರೋಪವೂ ಇವರಿಬ್ಬರ ಮೇಲಿದೆ. ಇವರು ಸ್ಲೀಪರ್ ಸೆಲ್ಗಳನ್ನು ನೇಮಿಸಿಕೊಳ್ಳುತ್ತಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆಂದೂ ತಿಳಿದು ಬಂದಿದೆ.