ಬೆಂಗಳೂರು, ಆ 21 (DaijiworldNews/DB): ಸಿನೆಮಾ ವೀಕ್ಷಿಸಿ ರಾತ್ರಿ ಮನೆಗೆ ಹಿಂತಿರುಗುತ್ತಿದ್ದ ದಂಪತಿಯ ಬೈಕ್ಗೆ ಲಾರಿ ಢಿಕ್ಕಿ ಹೊಡೆದು ಪತ್ನಿ ಮೃತಪಟ್ಟ ಘಟನೆ ಕಲ್ಯಾಣನಗರದ ಜಂಕ್ಷನ್ ಬಳಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಪತಿ ಗಂಭೀರ ಗಾಯಗೊಂಡಿದ್ದಾರೆ.
ಶ್ವೇತಾ (23) ಮೃತಪಟ್ಟ ಮಹಿಳೆ. ಪತಿ ಆನಂದ್ (28) ಗಂಭೀರ ಗಾಯಗೊಂಡಿದ್ದು, ಎಚ್ಬಿಆರ್ ಮುಖ್ಯ ರಸ್ತೆ ಬಳಿಯಿರುವ ಆಲ್ಟಿಯಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿಗೆ ಕೆಲ ಸಮಯದ ಹಿಂದಷ್ಟೇ ಮದುವೆಯಾಗಿತ್ತು ಎನ್ನಲಾಗಿದೆ.
ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.