ಬೆಂಗಳೂರು, ಆ 21 (DaijiworldNews/DB): ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ಚಿನ್ನಾಭರಣ ಕಳವು ಮಾಡಿ ಹೋಗುತ್ತಿದ್ದ ಬಿಎಸ್ಸಿ ಪದವೀಧರ ಕಳ್ಳನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 120 ಗ್ರಾಂ ಚಿನ್ನಾಭರಣ ಹಾಗೂ 7 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.
ದೆಹಲಿ ನಿವಾಸಿ ರಾಹುಲ್ ಬಂಧಿತ ಆರೋಪಿ. ಈತ ಬಿಎಸ್ಸಿ ಪದವೀಧರನಾಗಿದ್ದು, ದೆಹಲಿಯಿಂದ ಆಗಾಗ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿ ಒಂದಿಬ್ಬರು ಸಿಬಂದಿ ಇರುವ ಚಿನ್ನಾಭರಣ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದ. ಅಲ್ಲಿ ಚಿನ್ನಾಭರಣ ತೋರಿಸುವಂತೆ ಹೇಳಿ ಸಿಬಂದಿ ಗಮನ ಬೇರೆಡೆ ಸೆಳೆದು ಚಿನ್ನ ಕಳವು ಮಾಡಿ ಪರಾರಿಯಾಗುತ್ತಿದ್ದ. ಕದ್ದ ಆಭರಣಗಳನ್ನು ಕೂಡಲೇ ಮಾರಾಟ ಮಾಡಿ ಹಣವನ್ನು ಪತ್ನಿಯ ಖಾತೆಗೆ ಜಮೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ. ಆದರೆ ಕೋವಿಡ್ ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾತ ಕೊನೆಗೆ ಕಳ್ಳತನಕ್ಕೆ ಇಳಿದಿದ್ದ. ಜಯನಗರ ಹಾಗೂ ಮಲ್ಲೇಶ್ವರದ ಆಭರಣ ಮಳಿಗೆಗಳಲ್ಲಿ ಈತ ಚಿನ್ನಾಭರಣ ಕಳವುಗೈದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆತನ ಮುಖಚಹರೆ ಆಧರಿಸಿ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.