ಮಧ್ಯಪ್ರದೇಶ, ಆ 20 (DaijiworldNews/DB): ತಲೆಯ ಗಾಯದಿಂದಾಗಿ ಆಸ್ಪತ್ರೆಗೆ ಬಂದ ಮಹಿಳೆಗೆ ಬ್ಯಾಂಡೇಜ್ ಮಾಡಲು ಹತ್ತಿ ಇಡಬೇಕಾದ ಜಾಗದಲ್ಲಿ ಕಾಂಡೋಮ್ ರ್ಯಾಪರ್ ಇಟ್ಟು ಹೊಲಿಗೆ ಹಾಕಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಹಿಳೆಯೋರ್ವರು ತಲೆಗೆ ಆದ ಗಾಯಕ್ಕೆ ಚಿಕಿತ್ಸೆಗಾಗಿ ಮೊರಾನಾ ಜಿಲ್ಲೆಯ ಸಮುದಾಯ ಆಸ್ಪತ್ರೆಗೆ ಬಂದಿದ್ದರು. ಆದರೆ ಇಲ್ಲಿ ಗಾಯಕ್ಕೆ ಬ್ಯಾಂಡೇಜ್ ಹಾಕಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಮೊರಾನಾ ಜಿಲ್ಲಾಸ್ಪತ್ರೆಗೆ ಬಂದ ಮಹಿಳೆಯನ್ನು ವೈದ್ಯರು ಪರಿಶೀಲಿಸಿದಾಗ ಬ್ಯಾಂಡೇಜ್ ಸರಿಯಾಗದೆ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ವೈದ್ಯರು ಗಾಯ ಸ್ವಚ್ಚಗೊಳಿಸಿ ಬ್ಯಾಂಡೇಜ್ ತೆಗೆದು ನೋಡಿದಾಗ ಹತ್ತಿ ಇಡಬೇಕಾದ ಜಾಗದಲ್ಲಿ ಕಾಂಡೋಮ್ ರ್ಯಾಪರ್ ಇಟ್ಟು ಬ್ಯಾಂಡೇಜ್ ಹಾಕಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಶನಿವಾರ ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಕೂಡಲೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ತನಿಖೆಗೆ ಆದೇಶಿಸಿದೆ. ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ. ರಾಕೇಶ್ ಶರ್ಮಾ ಅವರು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಬ್ಲಾಕ್ ವೈದ್ಯಾಧಿಕಾರಿ ಪೊರ್ಸಾ, ಡಾ.ಪುಷ್ಪೇಂದ್ರ ದಂಡೋತಿಯಾ ಅವರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.